ಅರಣ್ಯ ಆಧಾರಿತ ಆದಿವಾಸಿಗಳಿಗೆ ಮೀಸಲಾತಿ ಸೌಲಭ್ಯ ಸಿಕ್ಕಿಲ್ಲ : ಬುಡಕಟ್ಟು ಕೃಷಿಕರ ಸಂಘ ಅಸಮಾಧಾನ

ಹೊಸ ದಿಗಂತ ವರದಿ, ಮಡಿಕೇರಿ:

ಸುಮಾರು 50 ಸಮುದಾಯಗಳನ್ನು ಎಸ್ಟಿ ಎಂದು ಘೋಷಿಸಿ ಶೇ.3ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದ್ದು, ರಾಜಕೀಯ ಲಾಭಕ್ಕಾಗಿ ಅನೇಕ ಸಮುದಾಯಗಳನ್ನು ಕಾನೂನು ಬಾಹಿರವಾಗಿ ಎಸ್ಟಿ ಎಂದು ಗುರುತಿಸಲಾಗಿದೆ. ಆದರೆ ಅರಣ್ಯ ಆಧಾರಿತ ಆದಿವಾಸಿಗಳಿಗೆ ಮೀಸಲಾತಿ ಸೌಲಭ್ಯ ಇನ್ನೂ ಕೂಡ ಸಿಕ್ಕಿಲ್ಲ ಎಂದು ಕೊಡಗು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಜೆ.ಎ.ಶಿವು, ಅರಣ್ಯ ಮೂಲ ಆದಿವಾಸಿಗಳಿಗೆ ರಾಜ್ಯ ಸರ್ಕಾರ ಶೇ.4 ರಷ್ಟು ಒಳಮೀಸಲಾತಿಯನ್ನು ನಿಗದಿಪಡಿಸುವುದರ ಮೂಲಕ ಅರಣ್ಯ ಹಕ್ಕು ಕಾಯ್ದೆ 2006ನ್ನು ಯಥಾವತ್ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಕೆಲವು ವರ್ಷಗಳ ಹಿಂದೆಯಷ್ಟೇ ಗುರುತಿಸಿಕೊಂಡಿರುವ ಸಮುದಾಯಗಳು ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆ, ಲೋಕಸಭೆಯವರೆಗೆ ರಾಜಕೀಯ ಪ್ರಾತಿನಿಧ್ಯವನ್ನು ಪಡೆದುಕೊಳ್ಳುತ್ತಿವೆ. ಅಲ್ಲದೆ ಬುಡಕಟ್ಟು ಸಮುದಾಯಕ್ಕೆ ನಿಗದಿಗೊಳಿಸಿರುವ 15 ಶಾಸಕರು, 2 ಸಂಸದ ಸ್ಥಾನಗಳ ಪೈಕಿ ಒಂದೇ ಒಂದು ಸ್ಥಾನ ಅರಣ್ಯ ಆಧಾರಿತ ಆದಿವಾಸಿಗಳಿಗೆ ದಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೂಲ ಆದಿವಾಸಿಗಳ ಭಾಷೆ, ಸಂಸ್ಕೃತಿ, ಆಚಾರ ವಿಚಾರ, ವಾಸಿಸುವ ಪ್ರದೇಶಗಳು, ಸಾಂಸ್ಕೃತಿಕ ಮೌಲ್ಯಗಳನ್ನು ಆಧರಿಸಿ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು. ವರದಿಯನ್ನು ಮೂಲ ಆದಿವಾಸಿ ಸಮುದಾಯಗಳ ಎದುರು ಮಂಡಿಸಿ ಘೋಷಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆಯ ಉಪಾಧ್ಯಕ್ಷ ಜೆ.ಕೆ.ತಿಮ್ಮಯ್ಯ, ಬುಡಕಟ್ಟು ಕೃಷಿಕರ ಸಂಘದ ಪ್ರಮುಖರಾದ ವಿಶ್ವನಾಥ್ ಹಾಗೂ ಜೆ.ಎ.ಶ್ಯಾಂ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!