ಹೊಸದಿಗಂತ ವರದಿ, ಹಾವೇರಿ :
ನ್ಯಾಯ ಸಮ್ಮತವಾಗಿ ಮೀಸಲಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲೆಯ ಶಿಗ್ಗಾಂವಿಯಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಭವನ ಉದ್ಘಾಟನಾ ಹಾಗೂ ಹರಧ್ಯಾನ ಮಂದಿರ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.
ನ್ಯಾಯ ನೀಡುವಾಗ ಇತರರಿಗೆ ಅನ್ಯಾಯವಾಗದಂತೆ ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ. ವಚನಾನಂದ ಸ್ವಾಮೀಜಿಗಳು ಸೈದ್ಧಾಂತಿಕವಾಗಿ ಮಾರ್ಗದರ್ಶನ ಮಾಡಿದ್ದಾರೆ. ಭಿನ್ನಮತ ವ್ಯಕ್ತವಾದಾಗ, ಎಲ್ಲರಿಗೂ ಮನವರಿಕೆ, ಮಾರ್ಗದರ್ಶನ ಮಾಡಿದ್ದಾರೆ. ಸರಿಯಾದ ಸಂದರ್ಭದಲ್ಲಿ ಸರಿಯಾದ ತೀರ್ಮಾನ ಮಾಡಲಾಗಿದೆ. ಮುತ್ಸದ್ದಿ ತನದ ಮಾರ್ಗದರ್ಶನವನ್ನು ನಿರೀಕ್ಷೆ ಗೆ ಮೀರಿ ನೀಡಿದ್ದಾರೆ ಎಂದರು.
ಜಯ ಮೃತ್ಯುಂಜಯ ಸ್ವಾಮೀಜಿಗಳ ದಿಟ್ಟ ಹೋರಾಟದಿಂದ ಸಮಾಜ ಹಾಗೂ ಸರ್ಕಾರದ ಜಾಗೃತಿ ಮೂಡಿಸಲು ಸಾಧ್ಯವಾಯಿತು ಎಂದರು.
ಯಾರಿಗೂ ಹೆದರುವುದಿಲ್ಲ
ಗುರುಗಳು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಸ್ವಂತ ಚಿಂತನೆ ಬದ್ಧತೆ ಅವರಿಗಿದೆ. ನಮ್ಮ ಸ್ವಂತ ಚಿಂತನೆಯಿಂದ ಈ ಕೆಲಸ ಮಾಡಲಾಗಿದೆ. ಯಾವುದೇ ರೋಲ್ ಕಾಲ್ ಅಥವಾ ಒತ್ತಡದಿಂದ ಈ ಕೆಲಸ ಮಾಡಿಲ್ಲ. ಇದನ್ನು ಜಾರಿಗೆ ತರಲು ಯಾರಿಗೂ ಹೆದರುವುದಿಲ್ಲ ಎಂದರು.
ಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲ
ನವ ಕರ್ನಾಟಕದಲ್ಲಿ ದೀನದಲಿತರು, ಆರ್ಥಿಕವಾಗಿ ಸಬಲರಾಗಬೇಕು. ವಿದ್ಯಾವಂತರಾಗಿ, ಸ್ವಾಭಿಮಾನದ ಬದುಕು ಬದುಕಬೇಕು. ಈ ಕನಸನ್ನು ಸಾಕಾರಗೊಳಿಸಲು ಹಿಂದೆಗೆಯುವುದಿಲ್ಲ ಎಂದರು.
ಮಾಡಿದ ಅನ್ಯಾಯ ಸರಿಪಡಿಸಲು ಕ್ರಮ ವಹಿಸಲಾಗಿದೆ. ಇದು ಕರ್ನಾಟಕದ ಅಭಿವೃದ್ಧಿಯ ಪ್ರಶ್ನೆ. ಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲ. ನಾವು ಭದ್ಧತೆಯಿಂದ ನಂಬಿರುವ ವಿಚಾರಗಳ ಬಗ್ಗೆ ಕೆಲಸ ಮಾಡಿದ್ದು, ಆತ್ಮಸಾಕ್ಷಿಯಾಗಿ ಕೆಲಸ ಮಾಡಲಾಗಿದೆ. ಇದು ೩೦ ವ?ಗಳ ಬೇಡಿಕೆಯಾಗಿದ್ದು, ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು.