ಹೊಸದಿಗಂತ ವರದಿ, ಚಿತ್ರದುರ್ಗ:
ಮೀಸಲಾತಿ ಭಿಕ್ಷೆಯಲ್ಲ, ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಂವಿಧಾನದಡಿ ನೀಡಿರುವ ಹಕ್ಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಇಲ್ಲಿಗೆ ಸಮೀಪದ ಸೀಬಾರದ ಬಳಿಯ ಬಂಜಾರ ಗುರಪೀಠದಲ್ಲಿ ಶುಕ್ರವಾರ ನಡೆದ ಬಂಜಾರ ಬುಡಕಟ್ಟು (ಲಂಬಾಣಿ) ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾಗಿರುವ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ನ್ಯಾಯದಡಿ ಸಮಾನ ಅವಕಾಶ ಸಿಗಬೇಕೆಂಬ ಆಶಯವನ್ನಿಟ್ಟುಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬರೂ ಶಿಕ್ಷಣ, ಆರೋಗ್ಯ, ನೌಕರಿ ಪಡೆಯಬೇಕಾಗಿರುವುದರಿಂದ ಜನಗಣತಿ ಆಗಬೇಕು. ಆಗ ಮಾತ್ರ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಾಧ್ಯ ಎಂದರು.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಎಲ್ಲಾ ಜಾತಿ ಧರ್ಮದವರು ಶಾಂತಿ, ಸೌಹಾರ್ಧತೆಯಿಂದ ಬಾಳುತ್ತಿರುವ ರಾಷ್ಟ್ರ ಯಾವುದಾದರೂ ಇದ್ದರೆ ಅದು ಭಾರತ. ಗುರುಪೀಠಗಳಿಂದ ಮಾತ್ರ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬಹುದು. ಅವಕಾಶ ಸಿಕ್ಕಿಲ್ಲ ಹಿಂದುಳಿದಿದ್ದೇವೆನ್ನುವ ಮನೋಭಾವನೆ ಬೇಡ. ಮುಂದುವರೆದವರಿಗಿಂತ ನಾವೇನು ಕಮ್ಮಿಯಿಲ್ಲ ಎನ್ನುವ ಛಲ ನಿಮ್ಮಲ್ಲಿ ಬೆಳೆಯಬೇಕು ಎಂದು ಲಂಬಾಣಿ ಜನಾಂಗಕ್ಕೆ ಕರೆ ನೀಡಿದರು.
ಸಮಾಜದಲ್ಲಿ ಒಳ್ಳೆಯದು, ಕೆಟ್ಟದ್ದು, ಎರಡು ಇದೆ. ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಂಡು ಮನುಷ್ಯತ್ವ ಮೈಗೂಡಿಸಿಕೊಳ್ಳಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ರಾಜ ಮಹಾರಾಜರಿದ್ದಂತೆ. ನೀವುಗಳು ಕಟ್ಟುವ ತೆರಿಗೆ ಹಣದಿಂದಲೇ ಸರ್ಕಾರ ನಡೆಯುವುದು. ಜನಗಣತಿ ಆಗಬೇಕು. ಆದರೆ ಮೀಸಲಾತಿಗಾಗಿ ಅಲ್ಲ. ಸರ್ಕಾರದ ಗಮನ ಸೆಳೆಯುವುದಕ್ಕಾಗಿ. ಬಂಜಾರ ಜನಾಂಗದವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಸಾಂಸ್ಕೃತಿಕ ರಾಯಭಾರಿಗಳಾಗಿರುವ ಬಂಜಾರ ಸಮುದಾಯ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ. ಆಧುನಿಕತೆ ಎಷ್ಟೇ ಮುಂದುವರೆದಿದ್ದರೂ ಲಂಬಾಣಿ ಜನಾಂಗ ತಮ್ಮ ಪೂರ್ವಜರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಇನ್ನೂ ಮುಂದುವರೆಸಿಕೊಂಡು ಬರುತ್ತಿರುವುದು ಸುಲಭದ ಕೆಲಸವಲ್ಲ. ದೇಶಕ್ಕೆ ಅಕ್ಕಿ, ಗೋಧಿ ಬೆಳೆದು ಕೊಟ್ಟವರಲ್ಲಿ ಬಂಜಾರ ಜನಾಂಗದ ಕೊಡುಗೆ ಬಹಳಷ್ಟಿದೆ. ನಿಮ್ಮ ಸಮಾಜದಲ್ಲಿ ಶಿಕ್ಷಣವಂತರು ಜಾಸ್ತಿಯಾಗಿ ಉನ್ನತ ಹುದ್ದೆಗಳಿಗೆ ಹೋಗಿದ್ದಾರೆ. ವಿಪರ್ಯಾಸವೆಂದರೆ ಶಿಕ್ಷಣವಂತರಾದ ಕೆಲವರು ಜನಾಂಗದ ಕಡೆ ತಿರುಗಿ ನೋಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುರುಘಾಮಠದ ಉಸ್ತುವಾರಿ ಬಸವಪ್ರಭುಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿ, ಶೋಷಿತರ ಪರವಾಗಿರುವ ಮುರುಘಾಮಠ. ಸಮ ಸಮಾಜ ಕಟ್ಟುವ ಆಶಯ ಇಟ್ಟುಕೊಂಡಿದೆ. ಎಲ್ಲಾ ಜಾತಿಯವರಿಗೂ ಒಬ್ಬೊಬ್ಬ ಸ್ವಾಮಿಯನ್ನು ಮಾಡಿ, ಐದು ಎಕರೆ ಜಾಗ ನೀಡಲಾಗಿದೆ. ೧೨ನೇ ಶತಮಾನದ ಬಸವಣ್ಣನವರ ದಾರಿಯಲ್ಲಿ ನಡೆಯುತ್ತಿರುವ ಶಿವಮೂರ್ತಿ ಶರಣರು ಸಾಮಾಜಿಕ ನ್ಯಾಯ ಸಿಕ್ಕಿಲ್ಲದವರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದ್ದಾರೆಂದು ಸ್ಮರಿಸಿದರು.
ಲಂಬಾಣಿ ಸಮಾಜಕ್ಕೆ ವಿಶಿಷ್ಟವಾದ ಸಂಸ್ಕೃತಿ ಭಾಷೆಯಿದೆ. ತನ್ನನ್ನು ತಾನು ತಿಳಿದುಕೊಂಡು ತನ್ನೊಳಗಿನ ತಪ್ಪುಗಳನ್ನು ಹುಡುಕಿ ಸರಿದಾರಿಯಲ್ಲಿ ನಡೆಯುವವರೆ ನಿಜವಾದ ಮಾನವರು. ಭಾರತದಲ್ಲಿ ಹಲವಾರು ಜಾತಿಗಳಿವೆ. ಆದರೆ ಲಂಬಾಣಿ ಸಮಾಜ ನೃತ್ಯದ ಮೂಲಕ ದೇಶದ ಗಮನ ಸೆಳೆದಿದೆ. ಬಹುಮುಖಿ ಸಂಸ್ಕೃತಿಯುಳ್ಳ ದೇಶ ನಮ್ಮದು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಸರ್ವರಿಗೂ ಸಮಾನತೆಯನ್ನು ಕೊಟ್ಟಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ. ಮಕ್ಕಳಿಗೆ ಆಸ್ತಿ ಗಳಿಸಿಡುವ ಬದಲು ವಿದ್ಯೆಯನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಲಂಬಾಣಿ ಜನಾಂಗಕ್ಕೆ ಕಿವಿಮಾತು ಹೇಳಿದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೀರಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಬೀರಾವರ ಪ್ರಕಾಶ್, ಕಂಬಾರ ಗುಂಡಯ್ಯ ಸ್ವಾಮೀಜಿ, ಬಾಂಬೆ ಕುಮಾರನಾಯ್ಕ, ಕೆ.ಜಿ.ಪುರುಷೋತ್ತಮ ನಾಯ್ಕ, ಕೃಷ್ಣನಾಯ್ಕ, ಚಂದ್ರಶೇಖರ ನಾಯ್ಕ, ಸುದೀರ್ ಲಮಾಣಿ, ಶೇಖರಪ್ಪ ರಾಠೋಡ್, ಮಹೇಶ್ನಾಯ್ಕ, ಕೆ.ಓ.ನಾಯ್ಕ, ನಾಗನಾಯ್ಕ, ಕವಿತಾಬಾಯಿ, ಮಾಲಬಾಯಿ, ಶಿಲ್ಪಾಬಾಯಿ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಸತೀಶ್ನಾಯ್ಕ, ಅಲೆಮಾರಿ, ಅರೆ ಅಲೆಮಾರಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಓ.ಪ್ರತಾಪ್ ಜೋಗಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.