ಹೊಸದಿಗಂತ ವರದಿ ಕೊಪ್ಪಳ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ಆದರೆ, ಇಲ್ಲೊಂದು ಕುಟುಂಬಕ್ಕೆ ಮತದಾನದ ಗುರುತಿನ ಚೀಟಿ, ರೇಶನ್ ಕಾಡ್೯ ಇಲ್ಲ. ಈ ಕುಟುಂಬ ಈವರೆಗೆ ಮತವನ್ನೇ ಹಾಕಿಲ್ಲ!
ಮತದಾನದ ಚೀಟಿ, ರೇಶನ್ ಕಾಡ್೯ ಸೇರಿ ಹಲವು ಗುರುತಿನ ಚೀಟಿಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿ ಗುರುತಿನ ಚೀಟಿಗಳನ್ನು ಮಾಡಿಸಬೇಕು. ಆದರೆ, ಕೊಪ್ಪಳದಲ್ಲಿ ದಪ್ಪ ಚರ್ಮದ ಅಧಿಕಾರಿಗಳಿದ್ದಾರೆ ಎಂಬುದಕ್ಕೆ ಈ ಕುಟುಂಬವೇ ಸಾಕ್ಷಿಯಾದಂತಿದೆ. ಜಾಗೃತಿ ಮೂಡಿಸಲು ಸರ್ಕಾರ ನೂರಾರು ಕೋಟಿ ರೂ. ಅನುದಾನ ನೀಡುತ್ತದೆ. ಆದರೆ, ಅನುಷ್ಠಾನದಲ್ಲಿ ಲೋಪವಾಗಿರುವ ಆರೋಪ ಕೇಳಿ ಬಂದಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯ ಮೆಹಬೂಬ್ ನಗರದ ಹಿಂಭಾಗದಲ್ಲಿ ಫಕೀರಪ್ಪ – ಲಕ್ಷ್ಮೀ ದಂಪತಿ ಸಿಕ್ಕ- ಸಿಕ್ಕ ಚಿಂದಿ ಬಟ್ಟೆಗಳು, ಹಳೆಯ ಸೀರೆಗಳು, ಹಳೆಯ ಫ್ಲೆಕ್ಸುಗಳು, ಹರಿದ ತಾಡಪತ್ರೆಗಳನ್ನೇ ಹೊದಿಸಿ ಸೂರೊಂದನ್ನು ಕಟ್ಟಿಕೊಂಡಿದ್ದಾರೆ. ಸುಮಾರು 16 ವರ್ಷ ದಿಂದ ಇಲ್ಲಿಯೇ ಇದ್ದರೂ, ಈವರಗೆ ರೇಶನ್ ಕಾಡ್೯ ಹಾಗೂ ಮತದಾರರ ಚೀಟಿ ಹೊಂದಿಲ್ಲ. ಅಧಿಕಾರಿಗಳು ಕೂಡ ಜಾಗೃತಿ ಮೂಡಿಸಿ ಗುರುತಿನ ಚೀಟಿ ನೀಡಿಲ್ಲ.
ಸರ್ಕಾರಿ ಕಚೇರಿಗಳಿಗೆ ಹಲವು ಬಾರಿ ಎಡತಾಕಿದರೂ ರೇಷನ್ ಕಾರ್ಡು ಸಹ ಇವರಿಗೆ ದೊರಕಿಲ್ಲ. ಈವರೆಗೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳೂ ಇವರನ್ನು ಮಾತನಾಡಿಸಿಲ್ಲ. ಅಕ್ಕಪಕ್ಕದ ಮನೆಯವರ ತುಸು ಸಹಾಯ ಬಿಟ್ಟರೆ ಬೇರೇನೂ ಇವರಿಗೆ ದೊರೆತಿಲ್ಲ.
ಫಕೀರಪ್ಪ ದಂಪತಿಗಳಿಗೆ ಮೂವರು ಮಕ್ಕಳಿದ್ದು, ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆ. ಕೂಲಿ ಕೆಲಸ ಮಾಡುವ ಈ ಕುಟುಂಬಕ್ಕೆ ರೇಶನ್ ಕಾಡ್೯ ಅಗತ್ಯವಿದೆ. ಇನ್ನಾದರೂ, ತಾಲೂಕಾಡಳಿತ, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.