ಹೊಸ ದಿಗಂತ ವರದಿ, ಮಡಿಕೇರಿ:
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿರೂಪಾಕ್ಷಪುರದಲ್ಲಿ ಕಾಡಾನೆ ಹಾವಳಿಗೆ ನಿವಾಸಿಗಳು ಹೈರಾಣಾಗಿದ್ದಾರೆ.
ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತಿರುವ ಗ್ರಾಮದಲ್ಲಿ ಕಾಡಾನೆಯೊಂದು ತೀವ್ರ ಉಪಟಳ ನೀಡುತ್ತಿದ್ದು, ಗ್ರಾಮದ ಕಾಂಕ್ರಿಟ್ ರಸ್ತೆಯಲ್ಲಿ ನಿರಾತಂಕವಾಗಿ ಸಂಚರಿಸುವ ಮೂಲಕ ನಿವಾಸಿಗಳು ಮನೆಯಿಂದ ಹೊರಗೆ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುರುವಾರ ಬೆಳಗಿನ ಜಾವ ದೇವಮ್ಮ ಎಂಬವರ ಮನೆಯ ಅಂಗಳಕ್ಕೆ ಲಗ್ಗೆಯಿಟ್ಟ ಕಾಡಾನೆ ಗೇಟ್ ಜಖಂಗೊಳಿಸಿದೆ. ಕೆ.ಜಿ.ಬಾಲ ಎಂಬವರ ತೆಂಗಿನ ಬೆಳೆ ಹಾನಿಗೊಳಿಸಿದೆ.
ಈ ಭಾಗದ ನಿವಾಸಿಗಳು ಸಣ್ಣ ಪ್ರಮಾಣದಲ್ಲಿ ತೋಟ ಹೊಂದಿದ್ದು, ಅರಣ್ಯದಿಂದ ಲಗ್ಗೆಯಿಡುವ ಕಾಡಾನೆ ತೋಟದೊಳಗೆ ಸಂಚರಿಸಿ ಮನೆಯ ಹಿತ್ತಲಿನಿಂದ ಸರಾಗವಾಗಿ ಮುಖ್ಯ ರಸ್ತೆಗೆ ಆಗಮಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕಾಫಿ, ತೆಂಗು, ಕಿತ್ತಳೆ ಮತ್ತಿತರ ಬೆಳೆಗಳನ್ನು ತಿಂದು, ತುಳಿದು ನಾಶಗೊಳಿಸುತ್ತಿದೆ ಎಂದು ಈ ಭಾಗದ ಗ್ರಾಮ ಪಂಚಾಯತಿ ಸದಸ್ಯರಾದ ಗಿರಿಜಾ, ಆರ್.ಕೆ.ಚಂದ್ರು ದೂರಿದ್ದಾರೆ.
ಇತ್ತೀಚೆಗಷ್ಟೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಕಾಡಾನೆ ದಾಳಿಗೆ ಸಿಲುಕಿ ಸ್ಥಳೀಯ ನಿವಾಸಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಪ್ರತಿನಿತ್ಯ ಬೆಳಗಿನ ಜಾವ ಮತ್ತು ಸಂಜೆ ಸಮಯದಲ್ಲಿ ರಸ್ತೆಯಲ್ಲಿಯೇ ಕಾಡಾನೆ ಸಂಚರಿಸುತ್ತಿದೆ. ಗ್ರಾಮದಲ್ಲಿರುವ ನಾಯಿಗಳು ಕಾಡಾನೆ ಕಂಡು ಬೊಗಳಿದರೆ ಅವುಗಳನ್ನು ಮನೆಯತ್ತ ಅಟ್ಟಿಸಿಕೊಂಡು ಬರುತ್ತದೆ. ಇದರಿಂದಾಗಿ ನಾಯಿಗಳು ಕೂಡಾ ಕಾಡಾನೆ ಕಂಡರೆ ಎಚ್ಚರಿಕೆ ನೀಡುವುದು ನಿಲ್ಲಿಸಿ ಬಿಟ್ಟಿದೆ.
ತೋಟ ಕೆಲಸ, ಕೂಲಿ ಕೆಲಸಗಳಿಗೆ ಬೆಳಗಿನ ಜಾವ ತೆರಳಬೇಕಾದರೆ ಕಾಡಾನೆ ದಾಳಿಯ ಭಯದಿಂದಲೇ ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಗ್ರಾಮಸ್ಥರಾದ ಸಣ್ಣಸ್ವಾಮಿ, ಎಚ್.ಪಿ.ಸ್ವಾಮಿ, ಹಸೈನಾರ್, ಕುಮಾರ್, ಕೆ.ಪಿ.ಮಹಮ್ಮದ್, ಮಣಿ, ಮಂಜು, ಫಾತಿಮಾ, ಸುರೇಂದ್ರ ನಾಯರ್, ಗೋಪಾಲಕೃಷ್ಣ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳಿಂದ ಪರಿಶೀಲನೆ: ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಅವರು, ಕಾಡಾನೆ ಸಂಚರಿಸುವ ಮಾರ್ಗಗಳನ್ನು ಪರಿಶೀಲನೆ ನಡೆಸಿದರು.
ತೋಟದಲ್ಲಿ ಉಂಟಾಗಿರುವ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ತಿಳಿಸಿದ ಅವರು, ಸಹಾಯಧನ ರೂಪದಲ್ಲಿ ಇಲಾಖೆಯಿಂದ ದೊರಕುವ ಸೌಲಭ್ಯ ಬಳಸಿಕೊಂಡು ಸೋಲಾರ್ ಬೇಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಉಪಟಳ ನೀಡುತ್ತಿರುವ ಕಾಡಾನೆಯನ್ನು ಶೀಘ್ರವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಸೋಲಾರ್, ಆನೆಕಂದಕಗಳು ಕಾಡಾನೆಗಳ ದಾಳಿ ತಡೆಗಟ್ಟುವಲ್ಲಿ ವಿಫಲವಾಗಿವೆ. ಕೇವಲ ತಾತ್ಕಾಲಿಕ ಪರಿಹಾರ ಮಾರ್ಗಗಳ ಬದಲಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸರಕಾರ ಚಿಂತನೆ ಹರಿಸಬೇಕಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ, ಗಿರಿಜನ ಮುಖಂಡ ಆರ್.ಕೆ.ಚಂದ್ರು ಆಗ್ರಹಿಸಿದ್ದಾರೆ.