ಹೊಸದಿಗಂತ ವರದಿ, ಶಿವಮೊಗ್ಗ:
ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣದ 2019 – 20 ರ ಸಾಲಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸದೆ ಪ್ರಕಟಿಸಿದ್ದ ಫಲಿತಾಂಶವನ್ನು ಹಿಂಪಡೆಯಲಾಗಿದೆ ಎಂದು ಕುಲಪತಿ ಪ್ರೊ. ವೀರಭದ್ರಪ್ಪ ತಿಳಿಸಿದರು.
ಅವರು ಬುಧವಾರ ಕುವೆಂಪು ವಿವಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ 2019-20 ರ ಪರೀಕ್ಷೆ ನಡೆಸಲಾಗಲಿಲ್ಲ. ಈ ಸಂದರ್ಭದಲ್ಲಿ ಎಲ್ಲರನ್ನು ಉತ್ತೀರ್ಣ ಎಂದು ಘೋಷಿಸಲಾಗಿತ್ತು. ಆದರೆ, ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ ಸಿಂಡಿಕೇಟ್ ಸಭೆಯಲ್ಲೂ ಅನುಮತಿ ಪಡೆದಿರಲಿಲ್ಲ. ಈಗ ಅನುಮತಿ ಪಡೆದು ಫಲಿತಾಂಶ ವಾಪಸ್ ಪಡೆಯಲಾಗಿದೆ ಎಂದರು.
ಕೆಲವು ವಿದ್ಯಾರ್ಥಿಗಳು ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಇದು ನ್ಯಾಯಾಲಯದಲ್ಲಿ ಬಾಕಿ ಇದೆ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆದು ಈ ವರ್ಷಾಂತ್ಯದೊಳಗೆ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗುವುದು ಎಂದರು.
ಈಗ ಪರೀಕ್ಷೆ ಇಲ್ಲದೆ ನೀಡಿರುವ ಫಲಿತಾಂಶವನ್ನೇ ಊರ್ಜಿತಗೊಳಿಸುವಂತೆ ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಹೋಗಿ ಆದೇಶ ತಂದರೆ ನ್ಯಾಯಾಲಯದ ಆದೇಶ ಪಾಲಿಸಲಾಗುತ್ತದೆ ಎಂದರು.
ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಕೂಡ ಪರಿಷ್ಕರಿಸಲು ಸಿಂಡಿಕೇಟ್ ಸಭೆ ಒಪ್ಪಿಗೆ ನೀಡಿದೆ ಎಂದರು.
ಅತಿಥಿ ಉಪನ್ಯಾಸಕರೆಂದು ಕರೆಯಲ್ಪಡುತ್ತಿದ್ದ ಉಪನ್ಯಾಸಕರನ್ನು ಇನ್ನುಮುಂದೆ ಬೋಧಕ ಸಹಾಯಕರು ಎಂದು ಕರೆಯಲಾಗುತ್ತದೆ. 15 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿದ ಯುಜಿಸಿ ನಿಯಮಾನುಸಾರ ವಿದ್ಯಾರ್ಹತೆ ಹೊಂದಿದ ಉಪನ್ಯಾಸಕರಿಗೆ ಮಾಸಿಕ 45 ಸಾವಿರ ರೂ., ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದ ಉಪನ್ಯಾಸಕರಿಗೆ 40 ಸಾವಿರ ರೂ., 15 ವರ್ಷಗಳಿಗಿಂತ ಕಡಿಮೆ ಯುಜಿಸಿ ವಿದ್ಯಾರ್ಹತೆ ಹೊಂದಿದವರಿಗೆ 38 ಸಾವಿರ ರೂ., ಯುಜಿಸಿ ವಿದ್ಯಾರ್ಹತೆ ಇಲ್ಲದವರಿಗೆ 36 ಸಾವಿರ ರೂ. ನೀಡಲಾಗುವುದು ಎಂದರು.
ಐದು ವರ್ಷಕ್ಕಿಂತ ಹೆಚ್ಚು, 10 ವರ್ಷಕ್ಕಿಂತ ಕಡಿಮೆ ಸೇವೆಸಲ್ಲಿಸಿದ ಯುಜಿಸಿ ವಿದ್ಯಾರ್ಹತೆ ಹೊಂದಿದವರಿಗೆ 35 ಸಾವಿರ ರೂ., ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 33 ಸಾವಿರ ರೂ. , 5 ವರ್ಷಕ್ಕಿಂತ ಕಡಿಮೆ ಇರುವ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರಿಗೆ 31 ಸಾವಿರ ರೂ., ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 30 ಸಾವಿರ ರೂ. ನೀಡಲಾಗುವುದು ಎಂದರು.