Saturday, December 13, 2025

ಪಾಕಿಸ್ತಾನ ಪರ ಬೇಹುಗಾರಿಕೆ: ಅಸ್ಸಾಂನಲ್ಲಿ ವಾಯುಪಡೆಯ ನಿವೃತ್ತ ಅಧಿಕಾರಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯೊಬ್ಬರನ್ನ ಅಸ್ಸಾಂನಲ್ಲಿ ಬಂಧಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಬೇಹುಗಾರಿಕೆ ಪ್ರಕರಣದಲ್ಲಿ ಅರುಣಾಚಲ ಪೊಲೀಸರು ನಾಲ್ವರು ಕಾಶ್ಮೀರಿ ನಿವಾಸಿಗಳನ್ನು ಬಂಧಿಸಿದ್ದಾರೆ.

ಆರೋಪಿಯನ್ನ ತೇಜ್‌ಪುರದ ಪಾಟಿಯಾ ಪ್ರದೇಶದ ನಿವಾಸಿ ಕುಲೇಂದ್ರ ಶರ್ಮಾ ಎಂದು ಗುರುತಿಸಲಾಗಿದೆ.

ಬಂಧಿತ ವ್ಯಕ್ತಿ ಪಾಕ್‌ ಬೇಹುಗಾರಿಕೆ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದಿದ್ದು, ಜೊತೆಗೆ ಸೂಕ್ಷ್ಮ ಮಾಹಿತಿಗಳನ್ನ ಪೂರೈಸುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಹಾಗಾಗಿ ನಿರಂತರ ನಿಗಾ ವಹಿಸಲಾಗಿತ್ತು. ಸದ್ಯ ಆತನನ್ನ ಬಂಧಿಸಿದ್ದು, ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿ ಅನುಮಾನಾಸ್ಪದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಆದ್ರೆ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ನಲ್ಲಿ ಪ್ರಮುಖ ಡೇಟಾಗಳನ್ನ ಅಳಿಸಿರುವ ಶಂಕೆಯಿದೆ. ಪಾಕ್‌ ಸಂಪರ್ಕದ ಬಗ್ಗೆ ಅನುಮಾನ ಬಲವಾಗಿದ್ದರೂ ತನಿಖೆ ಪೂರ್ಣಗೊಳ್ಳುವವರೆಗೆ ದೃಢಪಡಿಸಲು ಸಾಧ್ಯವಿಲ್ಲ ಎಂದು ಅಸ್ಸಾಂನ ಸೋನಿತ್‌ಪುರದ ಉಪ ಪೊಲೀಸ್ ವರಿಷ್ಠಾಧಿಕಾರಿ ಹರಿಚರಣ್ ಭೂಮಿಜ್ ತಿಳಿಸಿದ್ದಾರೆ.

ನಿವೃತ್ತಿಗೆ ಮುನ್ನ ಕುಲೇಂದ್ರ ಶರ್ಮಾ ತೇಜ್‌ಪುರದ ವಾಯುಪಡೆ ನಿಲ್ದಾಣದಲ್ಲಿ ಜೂನಿಯರ್‌ ವಾರಂಟ್‌ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸುಖೋಯ್‌ -30 ಸ್ಕ್ವಾಡ್ರನ್‌ ಸೇರಿದಂತೆ ಪ್ರಮುಖ ವಾಯುಪಡೆಯ ಮೇಲ್ವಿಚಾರಣೆ ನಡೆಸುತ್ತಿದ್ದರು. 2002ರಲ್ಲಿ ನಿವೃತ್ತಿಯಾದ ಬಳಿಕ ತೇಜ್‌ಪುರ ವಿಶ್ವವಿದ್ಯಾಲಯದಲ್ಲಿ ಸ್ವಲ್ಪ ಸಮಯದ ವರೆಗೆ ಕೆಲಸ ನಿರ್ವಹಿಸಿದ್ದರು.

ಸದ್ಯ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್)ನ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

error: Content is protected !!