ಗೋಖಲೆ ಸೆಂಟಿನರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ವೆರ್ಣೇಕರ್ ನಿಧನ

ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಗೋಖಲೆ ಸೆಂಟಿನರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ, ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರಾದ ಪ್ರೊ.ವಿ.ಆರ್. ವೆರ್ಣೇಕರ್ ಅವರು ಹೃದಯಾಘಾತದಿಂದ ನಿಧನರಾದರು.
ಕೆನರಾ ವೆಲಫರ್ ಟ್ರಸ್ಟಿನ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ವಿಜ್ಞಾನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಅವರು ಕಾಲೇಜಿನ ಪ್ರಾಚಾರ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಶಿಸ್ತು, ಸರಳತೆ, ಸಜ್ಜನಿಕೆಯ ಮೂಲಕ ಗುರುತಿಸಿಕೊಂಡಿದ್ದ ಅವರು ಸೇವಾ ನಿವೃತ್ತಿಯ ನಂತರ ದಿನಕರ ವೇದಿಕೆಯ ಸದಸ್ಯರಾಗಿ, ಗೌರವ ಸಲಹೆಗಾರರಾಗಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ದೈವಜ್ಞ ಬ್ರಾಹ್ಮಣ ಸಮಾಜದ ಮಠಾದೀಶ ಕ್ಷೇತ್ರ ಕರ್ಕಿ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮವನ್ನು ಅಂಕೋಲಾ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಸಮಾಜದ ಅಭಿವೃದ್ಧಿಗಾಗಿ ಹಲವಾರು ರೀತಿಯ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದರು.
ಪ್ರವಾಸದಿಂದ ವಿಮಾನದ ಮೂಲಕ ಮರಳುತ್ತಿರುವ ಸಂದರ್ಭದಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಪ್ರೊ.ವೆರ್ಣೇಕರ್ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಪ್ರೊ.ವಿ.ಆರ್. ವೆರ್ಣೇಕರ್ ಅವರ ನಿಧನಕ್ಕೆ ಕೆನರಾ ವೆಲಫರ್ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಟ್ರಸ್ಟಿಗಳು, ಗೋಖಲೆ ಸೆಂಟಿನರಿ ಕಾಲೇಜಿನ ಪ್ರಾಚಾರ್ಯರು, ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು, ದಿನಕರ ವೇದಿಕೆಯ ಅಧ್ಯಕ್ಷರು ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗೋಖಲೆ ಕಾಲೇಜಿನಲ್ಲಿ ಶೃದ್ಧಾಂಜಲಿ ಸಭೆ ನಡೆಸಿ ಪ್ರೊ.ವಿ.ಆರ್. ವೆರ್ಣೇಕರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!