ಹೊಸ ದಿಗಂತ ವರದಿ, ಮಂಡ್ಯ :
ರೇವಣ್ಣ ನನ್ನನ್ನು ಬೆದರಿಸುತ್ತಿದ್ದರು. ನಾವೂ ಮನುಷ್ಯರೇ, ನಮಗೂ ನೋವಾಗುತ್ತೆ ತಾನೆ. ಎಲ್ಲವೂ ಜೆಡಿಎಸ್ ನಾಯಕರಿಗೂ ಗೊತ್ತಿದೆ. ನಾನು ಯಾವುದೂ ಸುಳ್ಳು ಹೇಳಿಕೆ ನೀಡುತ್ತಿಲ್ಲ ಎಂದು ಸಚಿವ ನಾರಾಯಣಗೌಡ ಎಚ್.ಡಿ. ಕುಮಾರಸ್ವಾಮಿ ಕುಟುಂಬದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರೇವಣ್ಣ ಅವರು ನೀಡಿದ್ದ ಕಿರುಕುಳದ ಬಗ್ಗೆಯೂ ವಿವರಿಸಿದ್ದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು ಅಷ್ಟೆ. ಆದರೆ ರೇವಣ್ಣ ಅವರೇ ಸೂಪರ್ ಸಿಎಂ ಆಗಿದ್ದರು ಎಂದು ದೂರಿದರು.
ನಾವು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪತ್ರ ಕೊಟ್ಟರೆ ರೇವಣ್ಣ ಅವರು ಅದನ್ನು ಪಕ್ಕಕ್ಕೆ ಇಡುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ದನ ಬೆದರಿಸಿದ ಹಾಗೆ ಬೆದರಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಅಭಿವೃದ್ಧಿ ಬಗ್ಗೆ ಪತ್ರ ಕೊಟ್ಟರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಚನ್ನರಾಯಪಟ್ಟಣಕ್ಕೂ, ಶ್ರೀರಂಗಪಟ್ಟಣಕ್ಕೂ ಕೊಡುತ್ತಿದ್ದರು. ಆದರೆ ನಮಗೆ ಮಾತ್ರ ಕೊಡುತ್ತಿರಲಿಲ್ಲ. ನನಗೆ ಟಿಕೆಟ್ ಕೊಡಲೂ ಸಹ ರೇವಣ್ಣ ಹಾಗೂ ದೇವೇಗೌಡರಿಗೆ ಇಷ್ಟ ಇರಲಿಲ್ಲ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ತಿಳಿಸಿದರು.
ಜೆಡಿಎಸ್‌ನಲ್ಲೇ ಇದ್ದಿದ್ದರೆ ನಾನು ಏನೂ ಮಾಡಲಾಗುತ್ತಿರಲಿಲ್ಲ. ದೇವೇಗೌಡ-ರೇವಣ್ಣ ಕುಟುಂಬದವರಿಗೆ ಕಾಣುವುದು ಹಾಸನವೊಂದೆ. ಅದು ಬಿಟ್ಟರೆ ಏನೂ ಕಾಣುವುದಿಲ್ಲ ಎಂದು ಟೀಕಿಸಿದರು.
ಹಾಸನ, ಚನ್ನರಾಯಪಟ್ಟಣದಲ್ಲಿ ಕಾಮಗಾರಿಗಳು ನಡೆಯುತ್ತವೆ. ಅಭಿವೃದ್ಧಿ ಕಾರ‌್ಯಗಳೂ ನಡೆಯುತ್ತವೆ. ನಮ್ಮ ಪಕ್ಕದ ತಾಲೂಕಿನಲ್ಲಿ ನಡೆಯುತ್ತಿರುವುದು ನಮ್ಮಲ್ಲಿ ನಡೆಯುತ್ತಿಲ್ಲ ಎಂದು ತಿಳಿದ ಜನರೂ ಬೇಸರ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಮುಖಂಡರಲ್ಲಿ ಮನವಿ ಮಾಡಿ ಅಭಿವೃದ್ಧಿಗೆ ಒತ್ತಾಯಿಸುತ್ತಿದ್ದರೂ ಏನೂ ಮಾಡುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.