ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲಿನಲ್ಲಿದ್ದ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಅವರು ಜಾಮೀನು ಸಿಕ್ಕ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದಾರೆ.
ನೇರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (HD Devegowda) ನಿವಾಸಕ್ಕೆ ತೆರಳಿದ್ದು, ಅವರನ್ನು ಕಂಡ ಕೂಡಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Devegowda) ತಬ್ಬಿಕೊಂಡು ಸ್ವಾಗತಿಸಿದರು. ಇನ್ನು ಕುಟುಂಬಸ್ಥರನ್ನು ಕಂಡಕೂಡಲೇ ರೇವಣ್ಣ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಹನ್ನೊಂದು ದಿನಗಳ ಹಿಂದೆ ಇದೇ ದೇವೇಗೌಡರ ಮನೆಯಲ್ಲಿ ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಸೀದಾ ಅಲ್ಲಿಗೇ ಎಚ್.ಡಿ. ರೇವಣ್ಣ ಬಂದಿದ್ದಾರೆ. ಇದಕ್ಕಿಂತ ಮುಂಚಿತವಾಗಿ ಎಚ್.ಡಿ. ದೇವೇಗೌಡರು ಮನೆಯಲ್ಲಿ ವಿಶೇಷ ಪೂಜೆಯನ್ನು ಮಾಡಿಸಿದ್ದರು. ರೇವಣ್ಣ ಮನೆಗೆ ಎಂಟ್ರಿ ಆದ ತಕ್ಷಣ ಅವರನ್ನು ತಬ್ಬಿಕೊಂಡ ಕುಮಾರಸ್ವಾಮಿ ಸಂತೈಸಿದರು. ಅಲ್ಲಿಂದ ಸೀದಾ ಒಳಗೆ ಹೋದ ರೇವಣ್ಣ ಅವರು ಎಚ್.ಡಿ. ದೇವೇಗೌಡರ ಕೋಣೆಗೆ ಎಂಟ್ರಿ ಕೊಟ್ಟರು.
ದೇವೇಗೌಡರನ್ನು ನೋಡಿ ಕಾಲಿಗೆ ಬಿದ್ದು ಕಣ್ಣೀರು ಹಾಕಿದರು ಎನ್ನಲಾಗಿದೆ. ಜತೆಗೆ ತಾಯಿ ಚನ್ನಮ್ಮ ಅವರ ಆಶೀರ್ವಾದವನ್ನೂ ರೇವಣ್ಣ ಪಡೆದುಕೊಂಡರು.
ಭವಾನಿ ರೇವಣ್ಣ ನೆಗ್ಲೆಟ್?
ಎಚ್.ಡಿ. ರೇವಣ್ಣ ಅವರಿಗೆ ಸೋಮವಾರ ಸಂಜೆಯೇ ಬೇಲ್ ಸಿಕ್ಕರೂ ಭವಾನಿ ರೇವಣ್ಣ ಅವರ ಸುದ್ದಿಯೇ ಇಲ್ಲವಾಗಿದೆ. ಇನ್ನು ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೂ ಅವರು ಆಗಮಿಸಲಿಲ್ಲ. ರೇವಣ್ಣ ಜೈಲಿಗೆ ಹೋದಾಗಲೂ ನೋಡಲು ಹೋಗಲಿಲ್ಲ. ರೇವಣ್ಣ ಎಸ್ಐಟಿ ಕಸ್ಟಡಿಯಲ್ಲಿ ಇದ್ದಾಗಲೂ ಬರಲಿಲ್ಲ. ಬಿಡುಗಡೆ ಆಗಿ ದೇವೇಗೌಡರ ನಿವಾಸಕ್ಕೆ ರೇವಣ್ಣ ಬಂದರೂ ಅತ್ತ ಕಡೆ ಸುಳಿಯದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.