ಹೊಸದಿಗಂತ ವರದಿ, ದಾವಣಗೆರೆ :
ನಿವೇಶನದ ಕಂದಾಯ ಕಡಿಮೆ ಮಾಡಲು ಸುಮಾರು 50-60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, 20 ಸಾವಿರ ರೂ. ಲಂಚ ಪಡೆಯುವಾಗ ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹಾಗೂ ಕಂದಾಯ ಅಧಿಕಾರಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.
ಕಂದಾಯ ನಿರೀಕ್ಷಕ ನಾಗೇಶ, ಕಂದಾಯ ಅಧಿಕಾರಿ ಯು.ರಮೇಶ ಲೋಕಾಯುಕ್ತರ ಗಾಳಕ್ಕೆ ಲಂಚದ ಹಣದ ಸಮೇತ ಸಿಕ್ಕಿ ಬಿದ್ದವರು. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ವಾಸಿ ರಾಜು ಲಕ್ಷ್ಮಣ ಕಾಂಬ್ಳೆ ಎಂಬುವರು ಹರಿಹರ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀದೇವಿ ಪೆಟ್ರೋಲ್ ಬಂಕ್ ನಿವೇಶನ ಹೊಂದಿದ್ದಾರೆ. ಸುಮಾರು 3-4 ವರ್ಷಗಳ ಕಂದಾಯ ಪಾವತಿಸುವುದು ಬಾಕಿ ಇದ್ದು, ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ 1,39,400 ರೂ. ಪಾವತಿಸುವಂತೆ ಹರಿಹರ ನಗರಸಭೆ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ ಹಾಗೂ ಕಂದಾಯ ಅಧಿಕಾರಿ ಯು.ರಮೇಶ ಹೇಳಿದ್ದರು.
ಸದ್ಯಕ್ಕೆ 2020-21ನೇ ಸಾಲಿನ ದರದಂತೆ ಕಂದಾಯ ಮೊತ್ತವನ್ನು ಕಡಿಮೆ ಮಾಡಿ, ಉಳಿತಾಯವಾಗುವ ಹಣದಲ್ಲಿ ಶೇ.50ರಷ್ಟು ಅಂದರೆ ಸುಮಾರು 50-60 ಸಾವಿರ ರೂ. ಲಂಚ ನೀಡುವಂತೆ ಇಬ್ಬರೂ ರಾಜು ಲಕ್ಷ್ಮಣ ಕಾಂಬ್ಳೆಗೆ ಇಬ್ಬರೂ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಲಂಚ ಸ್ವೀಕರಿಸುತ್ತಿದ್ದ ಇಬ್ಬರೂ ಅಧಿಕಾರಿಗಳನ್ನು 20 ಸಾವಿರ ರೂ. ಲಂಚದ ಹಣದ ಸಮೇತ ಟ್ರ್ಯಾಪ್ ಮಾಡಿದ್ದಾರೆ.