March 24, 2026
Tuesday, March 24, 2026
spot_img

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರಂಪರೆಯ ಪುನರುತ್ಥಾನ: ಬದಲಾಗಲಿದೆ ದರುಶನ ಪದ್ಧತಿ, ಅನ್ನಪ್ರಸಾದ ಸೇವೆ!

ಹೊಸದಿಗಂತ ವರದಿ, ​ಉಡುಪಿ:

  • ಸುದೀಪ್ ರಾಜ್ ಸುಳ್ಯ

ಜಗತ್ಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠದ ಆಡಳಿತಾವಧಿಯಲ್ಲಿ ಭಕ್ತರ ದರ್ಶನ ವ್ಯವಸ್ಥೆ ಮತ್ತು ಅನ್ನಪ್ರಸಾದ ವಿತರಣೆಯಲ್ಲಿ ಐತಿಹಾಸಿಕ ಬದಲಾವಣೆಗಳ ಪರ್ವ ಆರಂಭವಾಗಿದೆ. ನೂರಾರು ವರ್ಷಗಳ ಪುರಾತನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಮಹತ್ತರ ನಿರ್ಧಾರವನ್ನು ಮಾಡಲಾಗಿದೆ.

​ಇನ್ನು ಮುಂದೆ ಕೃಷ್ಣದರ್ಶನಕ್ಕೆ ಬರುವ ಭಕ್ತರು ಕನಕದಾಸರ ಭಕ್ತಿಯ ಹಾದಿಯನ್ನೇ ಅನುಸರಿಸಲಿದ್ದಾರೆ. ಮೊದಲು ಕನಕನ ಕಿಂಡಿಯ ಮೂಲಕ ‘ ದರ್ಶನ ಪಡೆದು, ನಂತರ ಚಂದ್ರಮೌಳೀಶ್ವರ ಮತ್ತು ಹರಿಹರರ ಸಂಗಮ ಕ್ಷೇತ್ರ ಅನಂತೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಅಂತಿಮವಾಗಿ ಮಠದ ನವಗ್ರಹ ಕಿಂಡಿಯ ಮೂಲಕ ಕೃಷ್ಣನನ್ನು ಕಾಣುವ ಶಾಸ್ತ್ರೋಕ್ತ ವ್ಯವಸ್ಥೆ ಜಾರಿಗೆ ಬರಲಿದೆ. ಇದು ಶ್ರೀ ವಾದಿರಾಜ ಸ್ವಾಮಿಗಳು ಹಾಕಿಕೊಟ್ಟ ನವವಿಧ ಭಕ್ತಿಯ ಪರಂಪರೆಯಾಗಿದ್ದು, ಭಕ್ತರ ಕುಜ, ಶನಿ, ರಾಹು-ಕೇತುಗಳಂತಹ ನವಗ್ರಹ ದೋಷಗಳನ್ನು ನಿವಾರಿಸುವ ನಂಬಿಕೆಯಿದೆ. ಉಡುಪಿ ಎಂಬ ಹೆಸರು ಬರಲು ಕಾರಣವಾದ ಚಂದ್ರನು ರುದ್ರದೇವರನ್ನು ಒಲಿಸಿಕೊಂಡ ಪುರಾಣ ಹಿನ್ನೆಲೆಯನ್ನೂ ಈ ದರ್ಶನ ಕ್ರಮವು ಭಕ್ತರಿಗೆ ನೆನಪಿಸಲಿದೆ.

​ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್ ಪ್ರದೇಶದಿಂದ ಕ್ಯೂ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು 3 ರಿಂದ 5 ಸಾಲುಗಳ ಸುಸಜ್ಜಿತ ಹಾದಿ ನಿರ್ಮಾಣವಾಗುತ್ತಿದೆ. ಬೇಸಿಗೆಯ ಬಿಸಿಲಿನಿಂದ ತತ್ತರಿಸುವ ಭಕ್ತರಿಗೆ ಸಾಲಿನಲ್ಲಿ ನಿಂತಾಗಲೇ ಬೆಳಿಗ್ಗೆ 10 ಗಂಟೆಯಿಂದ ನಿಂಬೆಹಣ್ಣು, ಕಬ್ಬಿನ ಹಾಲು ಸೇರಿದಂತೆ ವಿವಿಧ ತಂಪು ಪಾನೀಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮಠದ ಭೋಜನ ಶಾಲೆಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಭಕ್ತರಿಗೂ ಸರಿಸಮಾನವಾಗಿ 10 ರಿಂದ 12 ಪದಾರ್ಥಗಳನ್ನೊಳಗೊಂಡ ‘ಶ್ರೀಕೃಷ್ಣ ಅನ್ನಪ್ರಸಾದ’ ದೊರೆಯುವಂತೆ ಮಾಡಲಾಗುತ್ತಿದೆ. ಈ ಬದಲಾವಣೆಗಳು ಉಡುಪಿ ಕೃಷ್ಣ ಮಠದ ಆಧ್ಯಾತ್ಮಿಕ ಮಹತ್ವವನ್ನು ಮತ್ತಷ್ಟು ಎತ್ತರಿಸಲಿವೆ.

ಶಾಸ್ತ್ರೋಕ್ತ ದರ್ಶನ ಕ್ರಮದ ಮಹತ್ವ
​ಪರ್ಯಾಯ ಪೀಠವನ್ನೇರುವ ಪ್ರತಿ ಮಠದ ಶ್ರೀಪಾದರು ಅನುಸರಿಸುವ ಪದ್ಧತಿಯನ್ನೇ ಭಕ್ತರಿಗೂ ಅಳವಡಿಸಲಾಗುತ್ತಿದೆ. ಭಕ್ತರು ಕನಕನಂತೆ ಭಕ್ತಿಪರವಶರಾಗಿ ಮೂರು ತಾಪತ್ರಯಗಳನ್ನು ಪರಿಹರಿಸುವ ಕನಕನ ಕಿಂಡಿಯಿಂದ ದರ್ಶನ ಮಾಡಿ ಮಠ ಪ್ರವೇಶಿಸಬೇಕು. ನಂತರ ಮನೋಭಿಮಾನಿಯಾದ ರುದ್ರದೇವರಲ್ಲಿ ‘ ಪ್ರಾರ್ಥಿಸಿ, ಮಧ್ವಾಚಾರ್ಯರು ಅದೃಶ್ಯರಾದ ಅನಂತಾಸನ ಸನ್ನಿಧಿಗೆ ನಮಸ್ಕರಿಸಿ, ಅಂತಿಮವಾಗಿ ನವಗ್ರಹ ಕಿಂಡಿಯ ಮೂಲಕ ಕೃಷ್ಣದರ್ಶನ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಸುಸಜ್ಜಿತ ಕ್ಯೂ ವ್ಯವಸ್ಥೆ ಮತ್ತು ಅನ್ನಪ್ರಸಾದ
​ಭಕ್ತರ ದಟ್ಟಣೆ ನಿವಾರಿಸಲು ಪಾರ್ಕಿಂಗ್ ಪ್ರದೇಶದಿಂದ 3 ಅಥವಾ 5 ಸಾಲುಗಳ ಹೊಸ ಸರತಿ ಸಾಲು ವ್ಯವಸ್ಥೆಯ ಕೆಲಸ ಪ್ರಗತಿಯಲ್ಲಿದೆ. ಬೇಸಿಗೆಯ ಬಿಸಿಲಿನಿಂದ ಕಾಲು ಸುಡದಂತೆ ಹಾಗೂ ಮಳೆಗೆ ಒದ್ದೆಯಾಗದಂತೆ ಈ ವ್ಯವಸ್ಥೆ ಇರಲಿದೆ. ಜೊತೆಗೆ, ಮಠದ ಎಲ್ಲಾ ಭೋಜನ ಶಾಲೆಗಳಲ್ಲಿ ತಾರತಮ್ಯವಿಲ್ಲದೆ ಸಮಾನವಾಗಿ 10 ರಿಂದ 12 ಪದಾರ್ಥಗಳನ್ನೊಳಗೊಂಡ ‘ಶ್ರೀಕೃಷ್ಣ ಅನ್ನಪ್ರಸಾದ’ ವಿತರಿಸುವ ಪ್ರಯೋಗ ಆರಂಭವಾಗಿದೆ.

​ಭಕ್ತರಿಗೆ ತಂಪು ಪಾನೀಯ ಹಾಗೂ ಇತಿಹಾಸ ಪ್ರಚಾರ
​ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರ ಅನುಕೂಲಕ್ಕಾಗಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ನಿಂಬೆಹಣ್ಣು, ಕಬ್ಬಿನ ಹಾಲು ಸೇರಿದಂತೆ ದಿನಕ್ಕೊಂದು ಪಾನೀಯ ವಿತರಿಸಲಾಗುವುದು. ಇದರೊಂದಿಗೆ ಉಡುಪಿಯ ಇತಿಹಾಸವನ್ನು ತಿಳಿಸಲು ಪ್ರತಿ ವಾರ ಅಥವಾ ತಿಂಗಳಿಗೊಮ್ಮೆ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರವಚನಗಳನ್ನು ಬಿತ್ತರಿಸಲು ತೀರ್ಮಾನಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !