ಬಾಂಗ್ಲಾದಲ್ಲಿ ಪ್ರತಿಭಟನೆ ವೇಳೆ ರೈಫಲ್ ಲೂಟಿ: ಶಸ್ತ್ರಾಸ್ತ್ರ ಒಪ್ಪಿಸಲು ಗಡುವು ಕೊಟ್ಟ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಆಗಸ್ಟ್‌ 19ರ ಒಳಗಾಗಿ ಪ್ರತಿಭಟನೆಯ ಸಮಯದಲ್ಲಿ ಪೊಲೀಸ್‌ ಠಾಣೆಗಳಿಂದ ಲೂಟಿ ಮಾಡಿರುವ ರೈಫಲ್‌ಗಳು ಒಳಗೊಂಡಂತೆ ಅಕ್ರಮವಾಗಿ ಇರಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತೆ ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರ ಬ್ರಿಗೇಡಿಯರ್‌ ಜನರಲ್‌ (ನಿವೃತ್ತ) ಎಂ.ಸಖಾವತ್‌ ಹುಸೇನ್‌ ಅವರು ಜನರಲ್ಲಿ ಕೇಳಿಕೊಂಡಿದ್ದಾರೆ.

ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ಹಿಂತಿರುಗಿಸಬೇಕು. ನಿಗದಿತ ಗಡುವಿನ ಬಳಿಕ ಅಧಿಕಾರಿಗಳು ಶೋಧ ಕಾರ್ಯ ನಡೆಸಲಿದ್ದು, ಆ ವೇಳೆ ಯಾರಾದರೂ ಅನಧಿಕೃತವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹುಸೇನ್ ಹೇಳಿರುವುದಾಗಿ ‘ಡೈಲಿ ಸ್ಟಾರ್’ ದಿನಪತ್ರಿಕೆ ವರದಿ ಮಾಡಿದೆ.

ಇಲ್ಲಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರೆಸೇನಾ ಪಡೆಯ ಸಿಬ್ಬಂದಿಯನ್ನು ಸೋಮವಾರ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೂ ಒಳಗೊಂಡಂತೆ ಸುಮಾರು 500 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

‘ಯುವಕನೊಬ್ಬ 7.62 ಎಂಎಂ ರೈಫಲ್‌ ಅನ್ನು ಕೊಂಡೊಯ್ಯುತ್ತಿರುವ ದೃಶ್ಯವಿರುವ ವಿಡಿಯೊ ಹರಿದಾಡಿದೆ. ಅಂದರೆ ಅವರು ಇನ್ನೂ ರೈಫಲ್‌ ಒಪ್ಪಿಸಿಲ್ಲ. ಭಯದಿಂದಾಗಿ ನೀವು ಬಂದೂಕು ವಾಪಸ್‌ ಮಾಡದಿದ್ದರೆ, ಬೇರೆಯವರ ಮೂಲಕ ಒಪ್ಪಿಸಿ’ ಎಂದು ಹೇಳಿದರು.

ಬಾಂಗ್ಲಾದೇಶದ ಪೊಲೀಸರು ತಮ್ಮ ಮುಷ್ಕರ ಅಂತ್ಯಗೊಳಿಸಲು ಒಪ್ಪಿದ್ದು, ಸೋಮವಾರ ಕರ್ತವ್ಯಕ್ಕೆ ಹಾಜರಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ದೇಶದಾದ್ಯಂತ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಬಾಂಗ್ಲಾ ಪೊಲೀಸರು ಆಗಸ್ಟ್‌ 6ರಿಂದ ಮುಷ್ಕರ ಆರಂಭಿಸಿ, ಕರ್ತವ್ಯದಿಂದ ದೂರವುಳಿದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!