ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಕನ್ನಡದಲ್ಲಿ ಬಿಡುಗಡೆಯಾಗಿ ಇಡಿ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕಳೆದ ವಾರ ತೆಲುಗು ಮತ್ತು ಹಿಂದಿಯಲ್ಲಿ ಈ ಸಿನಿಮಾ ತೆರೆಕಂಡಿದ್ದು ಇಲ್ಲಿಯೂ ಭರ್ಜರಿ ಯಶಸ್ಸು ಕಾಣಲಿದ್ದು, ಕಲೆಕ್ಷನ್ ಗಳ ಸುರಿಮಳೆಯಾಗಲಿದೆ.
ಈ ಚಿತ್ರದಲ್ಲಿ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ, ಅದರಲ್ಲೂ ಭೂತಕೋಲ ನರ್ತಕರು, ಅವರ ಕುಣಿತ, ಆಚಾರ-ವಿಚಾರಗಳನ್ನು ತೋರಿಸಲಾಗಿದೆ. ಈ ಸಿನಿಮಾದಲ್ಲಿ ಭೂತ ಕೋಲ ವೇಷ ಹಾಕುವವರು ಮಾಡುವ ಶಬ್ದ ಹೆಚ್ಚು ಆಕರ್ಷಣೆಯಾಗಿದೆ. ಈ ಶಬ್ದ ಮಾಡುತ್ತಾ ನೃತ್ಯ ಮಾಡುವ ಸದ್ದಿಗೆ ಪ್ರೇಕ್ಷಕರು ಫಿದಾ ಆಘಿದ್ದಾರೆ. ಆದರೆ ಸಿನಿಮಾ ನೋಡಿದ ಕೆಲವರು ಆ ಶಬ್ಧವನ್ನ ಹೊರಗೆ ಅನುಕರಿಸಿ ರೀಲ್ಸ್ ಮಾಡುತ್ತಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಹೀಗೆ ಮಾಡದಂತೆ ಮನವಿ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಿಷಬ್ ಈ ಚಿತ್ರವು ದೊಡ್ಡ ಯಶಸ್ಸನ್ನು ನೀಡಿದೆ. ನಿಮ್ಮ ಪ್ರೀತಿಗೆ ತುಂಬಾ ಧನ್ಯವಾದಗಳು. ನಮ್ಮ ಸಿನಿಮಾದಲ್ಲಿ ತೋರಿಸುವ ಓ.. ಎಂಬ ಶಬ್ದವನ್ನು ಹೊರಗಿನ ಕೆಲವರು ಅನುಕರಿಸುತ್ತಾರೆ. ಅದು ನಿಮ್ಮ ಅಭಿಮಾನವೇ ಸರಿ, ಇಲ್ಲ ಅಂತ ಹೇಳುವುದಿಲ್ಲ. ಆದರೆ, ದಯವಿಟ್ಟು ಅದನ್ನು ಅನುಕರಿಸಬೇಡಿ. ಅದು ಅಲ್ಲಿನ ಜನರ ಭಾವನೆ, ನಂಬಿಕೆ. ಇದು ಬಹಳ ಸೂಕ್ಷ್ಮವಾದ ವಿಷಯ. ಹೊರಗೆ ಇಂತಹ ಶಬ್ದಗಳನ್ನು ಮಾಡುವುದರಿಂದ ತಮ್ಮ ಸಂಪ್ರದಾಯಕ್ಕೆ ಧಕ್ಕೆಯಾಗುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆ ಹಾಗಾಗಿಯೇ ಹೊರಗಡೆ ಎಲ್ಲಿಯೂ ಈ ಸಿನಿಮಾದ ಶಬ್ದಗಳನ್ನು ಯಾರೂ ಅನುಕರಿಸಬಾರದು ಎಂದು ಮನವಿ ಮಾಡಿದರು.