ಹೊಸದಿಗಂತ ವರದಿ ಮಂಗಳೂರು:
ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಸಮುದ್ರ ತೀರಗಳಲ್ಲಿ ಅಪಾಯ ಹೆಚ್ಚಾಗಿದೆ. ಇದೇ ಕಾರಣದಿಂದಾಗಿ ಪ್ರವಾಸಿ ತಾಣವಾದ ಮಲ್ಪೆಯ ಸೈಂಟ್ ಮೇರೀಸ್ ದ್ವೀಪಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
ವೀಕೆಂಡ್ ಹಾಗೂ ರಜಾದಿನಗಳಲ್ಲಿ ಜನರು ಬೀಚ್‌ಗಳ ಕಡೆ ಮುಖ ಮಾಡಿದ್ದಾರೆ. ಆದರೆ ಯಾವುದೇ ಅಹಿತಕರ ಘಟನೆಗಳು ಜರುಗಬಾರದೆಂದು ಸೈಂಟ್ ಮೇರೀಸ್ ದ್ವೀಪ ಪ್ರವೇಶಕ್ಕೆ ನಾಲ್ಕು ತಿಂಗಳ ಕಾಲ ನಿರ್ಬಂಧ ಹೇರಲಾಗಿದೆ.
ಇದರ ಜೊತೆಗೆ ನೀರಿನಲ್ಲಿ ಯಾವುದೇ ಕ್ರೀಡೆಯನ್ನು ಆಡಲು ಅನುಮತಿ ನಿರಾಕರಿಸಲಾಗಿದೆ. ಮಳೆಗಾಲ ಸಮೀಪಿಸುತ್ತಿದ್ದು, ಅಲೆಗಳ ಅಬ್ಬರ ಜೋರಾಗಿದೆ.
ಪ್ರತೀ ವರ್ಷವೂ ಮೇ.15ರಿಂದ ಸೆ.15ರವರೆಗೆ ದ್ವೀಪಕ್ಕೆ ಎಂಟ್ರಿ ನೀಡುವುದಿಲ್ಲ. ಇಷ್ಟೇ ಅಲ್ಲದೇ ಬೋಟ್ ಚಲಾಯಿಸಲು ಕೂಡ ಅನುಮತಿ ಇಲ್ಲ. ಮಕ್ಕಳಿಗೆ ಇನ್ನೂ 15ದಿನಗಳ ಬೇಸಿಗೆ ರಜೆ ಬಾಕಿ ಇದೆ, ಈ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಸಡಿಲ ಮಾಡಿ, ಕೆಲವು ದಿನಗಳಾದ್ರು ಜಲಕ್ರೀಡೆಗೆ ಅನುಮತಿ ನೀಡಿ ಎಂದು ಪ್ರವಾಸಿಗರು ಮನವಿ ಮಾಡಿದ್ದಾರೆ.
ಆದರೆ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.