ಹಿಮಾಲಯದ ಶಿಖರದಲ್ಲಿರುವ ಕೇದಾರನಾಥ ಯಾತ್ರೆಗೆ ಹೋಗುವುದು ಕೇವಲ ಪ್ರವಾಸವಲ್ಲ, ಅದು ಆತ್ಮಶುದ್ಧಿಯ ಪ್ರಯಾಣ. ಈ ಪವಿತ್ರ ದಾರಿಯಲ್ಲಿ ಒಂದು ಮುಖ್ಯ ಮೆಟ್ಟಿಲಿದೆ ಅದು – ಗೌರಿಕುಂಡ. ಇತರ ತೀರ್ಥಸ್ಥಳಗಳಿಗಿಂತ ವಿಭಿನ್ನವಾಗಿ, ಇಲ್ಲಿನ ಬಿಸಿನೀರು ಮತ್ತು ಪೌರಾಣಿಕ ಹಿನ್ನೆಲೆ, ಈ ಸ್ಥಳವನ್ನು ಭಕ್ತರಲ್ಲಿ ಅಪಾರ ನಂಬಿಕೆ ಹುಟ್ಟಿಸುತ್ತದೆ. ಕೇದಾರನಾಥಕ್ಕೆ ಪಾದಯಾತ್ರೆ ಆರಂಭಿಸುವ ಮುನ್ನ ಇಲ್ಲಿ ಸ್ನಾನ ಮಾಡುವುದು ಶರೀರ ಮಾತ್ರವಲ್ಲ, ಮನಸ್ಸನ್ನೂ ಶುದ್ಧಗೊಳಿಸುವ ಧಾರ್ಮಿಕ ಆಚರಣೆ.
ಈ ಸ್ನಾನದ ಹಿಂದಿರುವ ಆಧ್ಯಾತ್ಮಿಕ ಹಾಗೂ ಪೌರಾಣಿಕ ಮಹತ್ವ: ಪುರಾಣಗಳ ಪ್ರಕಾರ, ಈ ಸ್ಥಳದಲ್ಲಿಯೇ ಪಾರ್ವತಿ ದೇವಿಯು ಶಿವನನ್ನು ತನ್ನ ಪತಿಯನ್ನಾಗಿ ಪಡೆಯಲು ಕಠಿಣ ತಪಸ್ಸು ಮಾಡಿದ್ದಳು. ಜೊತೆಗೆ ಗಣೇಶನ ಶಿರಚ್ಛೇದ ಮಾಡಿ ನಂತರ ಅವನಿಗೆ ಆನೆಯ ತಲೆಯನ್ನು ನೀಡಿ ಪುನರ್ಜನ್ಮದ ನೀಡಿದ ಸ್ಥಳವೂ ಕೂಡ ಇದೇ ಎಂದು ನಂಬಲಾಗಿದೆ.
ಹಿಂದು ಧರ್ಮದ ಪ್ರಕಾರ, ಗೌರಿಕುಂಡದ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ವ್ಯಕ್ತಿಯ ಪಾಪ ಕಳೆಯುತ್ತದೆ. ಹಿಂದಿನ ಜನ್ಮದ ಪಾಪದ ಫಲವನ್ನೂ ತೊಳೆದುಹಾಕುತ್ತದೆ ಎಂಬ ನಂಬಿಕೆ ಇದೆ. ಇದು ಭಕ್ತಿಗೆ ಶುರುವಾಗುವ ಹೊಸ ಹಂತ.
ಔಷಧೀಯ ಗುಣವಿರುವ ಬಿಸಿನೀರು
ಗೌರಿಕುಂಡದ ಬಿಸಿನೀರು ಆರೋಗ್ಯಕ್ಕೂ ಲಾಭಕಾರಿಯೆಂದೇ ಪ್ರಸಿದ್ಧ. ಸ್ಥಳೀಯರು ಹೇಳುವಂತೆ, ಇದು ಚರ್ಮದ ಕಾಯಿಲೆ, ವಾತ, ಜ್ವರ ಮುಂತಾದ ಸಮಸ್ಯೆಗಳಿಗೆ ಉಪಶಮನ ನೀಡಬಲ್ಲದು. ಸ್ನಾನ ಅಂದ್ರೆ ಕೇವಲ ಧಾರ್ಮಿಕ ಆಚರಣೆ ಅಲ್ಲ, ಅದು ದೇಹದ ಶುದ್ಧಿಯ ಮಾರ್ಗವೂ ಹೌದು.
ಅಂತಿಮವಾಗಿ, ಗೌರಿಕುಂಡದಲ್ಲಿ ಸ್ನಾನ ಮಾಡುವುದು ಕೇವಲ ಸಂಪ್ರದಾಯವಲ್ಲ – ಅದು ಶ್ರದ್ಧೆ, ಶುದ್ಧತೆ, ಶಕ್ತಿ ಮತ್ತು ಶಾಂತಿಯ ಸಂಯೋಜನೆಯೇ ಸರಿ. ಹೀಗಾಗಿ, ನೀವು ಶಿವನ ಧಾಮ ಕೇದಾರನಾಥಕ್ಕೆ ಪ್ರಯಾಣ ಬೆಳೆಸುವ ಮುನ್ನ ಈ ಪವಿತ್ರ ಕುಂಡದಲ್ಲಿ ಒಂದು ನಿಮಿಷ ನಿಲ್ಲಿ – ಅದು ನಿಮ್ಮ ಯಾತ್ರೆಯ ಅರ್ಥವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.