October 10, 2026
Saturday, October 10, 2026
spot_img

ಫೀಲ್ಡಿಂಗ್ ವೈಫಲ್ಯವೇ ಸೋಲಿಗೆ ಕಾರಣ: ತಪ್ಪುಗಳಿಂದ ಪಾಠ ಕಲಿಯುತ್ತೇವೆ ಎಂದ ರಿಯಾನ್ ಪರಾಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೃಹತ್ ಮೊತ್ತ ಕಲೆಹಾಕಿದರೂ ಗೆಲುವು ಕೈತಪ್ಪಿದ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ಶಿಬಿರದಲ್ಲಿ ಆತ್ಮಾವಲೋಕನ ಶುರುವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದರೂ, ಫೀಲ್ಡಿಂಗ್‌ನಲ್ಲಿ ನಡೆದ ಎಡವಟ್ಟುಗಳು ತಂಡಕ್ಕೆ ದುಬಾರಿಯಾದವು ಎಂದು ನಾಯಕ ರಿಯಾನ್ ಪರಾಗ್ ಒಪ್ಪಿಕೊಂಡಿದ್ದಾರೆ. ವಿಶೇಷವಾಗಿ ಕೈಚೆಲ್ಲಿದ ಕ್ಯಾಚ್‌ಗಳು ಪಂದ್ಯದ ದಿಕ್ಕೇ ಬದಲಿಸಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪಂದ್ಯದ ಬಳಿಕ ಮಾತನಾಡಿದ ಪರಾಗ್, ಬಲಿಷ್ಠ ಮೊತ್ತ ಪೇರಿಸಿದ್ದರೂ ಅದನ್ನು ರಕ್ಷಿಸಿಕೊಳ್ಳುವಲ್ಲಿ ತಂಡ ವಿಫಲವಾಯಿತು ಎಂದರು. ಅಭಿಷೇಕ್ ಶರ್ಮಾ ಅವರಂತಹ ಅಪಾಯಕಾರಿ ಬ್ಯಾಟರ್‌ಗೆ ಅವಕಾಶ ನೀಡಿದರೆ ಅವರು ಪಂದ್ಯದ ನಿಯಂತ್ರಣವನ್ನು ಸುಲಭವಾಗಿ ತಮ್ಮ ಕಡೆ ತಿರುಗಿಸಿಕೊಳ್ಳುತ್ತಾರೆ. ಅದೇ ಈ ಪಂದ್ಯದಲ್ಲೂ ನಡೆದಿದೆ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ:

ಫೀಲ್ಡಿಂಗ್‌ನಲ್ಲಿನ ನಿರ್ಲಕ್ಷ್ಯವೇ ಸೋಲಿನ ಪ್ರಮುಖ ಕಾರಣವಾಗಿದ್ದು, ಮುಂದಿನ ಪಂದ್ಯಗಳ ಮೊದಲು ಈ ವಿಭಾಗದಲ್ಲಿ ಕಠಿಣ ಅಭ್ಯಾಸ ನಡೆಸಬೇಕಿದೆ ಎಂದು ಹೇಳಿದರು. ತಂಡದ ಫೀಲ್ಡಿಂಗ್ ಕೋಚ್ ಟ್ರೆವರ್ ಪೆನ್ನಿ ಆಟಗಾರರಿಗೆ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂಬ ಸುಳಿವು ಸಹ ನೀಡಿದರು.

ಇನ್ನೊಂದೆಡೆ 228 ರನ್ ಸಾಕಾಗಲಿಲ್ಲ ಎಂಬುದು ಬೇಸರ ತಂದಿದೆ ಎಂದ ಪರಾಗ್, ಕೊನೆಯ ಓವರ್‌ಗಳಲ್ಲಿ ವೇಗವಾಗಿ ರನ್ ಕಲೆಹಾಕಲು ಸಾಧ್ಯವಾಗಿದ್ದರೆ ಫಲಿತಾಂಶ ಬದಲಾಗಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಬೌಲಿಂಗ್ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಿಚ್‌ನ ಸ್ವಭಾವ ಮತ್ತು ಎದುರಾಳಿ ಬ್ಯಾಟರ್‌ಗಳ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಸಮರ್ಥಿಸಿಕೊಂಡರು.

ಮುಂದಿನ ಪಂದ್ಯದಲ್ಲಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದು ಗೆಲುವಿನ ಹಾದಿಗೆ ಮರಳುವ ವಿಶ್ವಾಸವನ್ನು ರಾಜಸ್ಥಾನ್ ನಾಯಕ ವ್ಯಕ್ತಪಡಿಸಿದ್ದಾರೆ.

Must Read