ಸಾರಿಗೆ ನೌಕರರ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಆ.5ಕ್ಕೆ ರಸ್ತೆ ಸಾರಿಗೆ ಬಸ್ ಸಂಚಾರ ಬಂದ್

ಹೊಸದಿಗಂತ ಚಿತ್ರದುರ್ಗ
ಸಾರಿಗೆ ನೌಕರರ 38 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಕೂಡಲೇ ನೀಡಬೇಕು. ಇಲ್ಲವಾದಲ್ಲಿ ಇದೇ ಆ.೦೫ ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಐಟಿಯುಸಿ ಜಿಲ್ಲಾ ಮಂಡಳಿಯ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ಗೌರವಾಧ್ಯಕ್ಷ ಸುರೇಶ್ ಬಾಬು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ನೌಕರರು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳು ಹೇಳುವುದು ಒಂದು. ಮಾಡುವುದು ಒಂದಾಗಿದೆ. ೩೮ ತಿಂಗಳ  ವೇತನ ಪರಿಷ್ಕರಣೆ ಹಿಂಬಾಕಿಯನ್ನು ಕೇಳಿದರೆ ಸಾರಿಗೆ ಸಚಿವರು ಹಿಂದಿನ ಸರ್ಕಾರದ ಮೇಲೆ ಬೆರಳಿಟ್ಟು ತೋರಿಸುತ್ತಿದ್ದಾರೆ ಇದರಿಂದ ಸಮಸ್ಯೆ ಬಗೆಹರಿಯದೆ ಉಳಿದಿದೆ ಎಂದು ಕಳವಳ ವ್ಯಕ್ತಡಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಿದಾಗ ಸರ್ಕಾರ ಎಸ್ಮಾ ಜಾರಿ ಮಾಡುತ್ತೇವೆ ಎಂದು ಹೆದರಿಸುವ ತಂತ್ರಗಾರಿಕೆ ಮಾಡಿತು. ಅಲ್ಲದೇ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಿ  ಖಾಸಗಿ ಬಸ್‌ಗಳನ್ನು ಓಡಿಸುತ್ತೇವೆ ಎಂದು ಹೇಳುವ ಮೂಲಕ ಸಾರಿಗೆ ಸಚಿವರು ಉಂಬತನ ಮೆರೆಯುತ್ತಿದ್ದಾರೆ. ನಮ್ಮ ಮುಷ್ಕರಿದಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಆದರೆ ಇದು ನಮಗೆ ಅನಿವಾರ್ಯ. ಸರ್ಕಾರ ನಮಗೆ ಸಕಾಲಕ್ಕೆ ಸೌಲಭ್ಯ ನೀಡಿದ್ದರೆ ನಾವು ಮುಷ್ಕರದ ಹಾದ್ನಿ ಹಿಡಿಯುತ್ತಿರಲಿಲ್ಲ ಎಂದರು.
ಪಂಚ ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದು ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾ ಬಂದಿದ್ದಾರೆ. ಆದರೆ ಸಾರಿಗೆ ನೌಕರರ ೩೮ ತಿಂಗಳ ಪರಿಷ್ಕರಣೆ ವೇತನ ಹಿಂಬಾಕಿ ನೀಡಲು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಾರಿಗೆ ನೌಕರರಿಗೆ ಏನಾದರೂ ಮಾಡಿ ಸರ್ಕಾರದ ಯೋಜನೆಗಳನ್ನು ಜಾರಿ ಮಾಡಿ ಎಂದು ಸರ್ಕಾರ ಹೇಳುತ್ತದೆ. ಆದರೆ ನೌಕರರ ಬೇಡಿಕೆಗಳನ್ನು ಮಾತ್ರ ಈಡೇರಿಸುವುದಿಲ್ಲ. ಆದ್ದರಿಂದ ಸಾರಿಗೆ ನೌಕರರ ಬೇಡಿಕೆ ಈಡೇರುವವರೆಗೂ ಆ.೦೫ ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ಆ.೦೫ ರಂದು ನಡೆಯುವ ಮುಷ್ಕರದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಶನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಶನ್, ಕೆಎಸ್‌ಆರ್‌ಟಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಗಳು ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಸಹ ಭಾಗವಹಿಸಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ಅಧ್ಯಕ್ಷ ಕಾಂತರಾಜ್, ಕಾರ್ಯಾಧ್ಯಕ್ಷ ರಹೀಂಸಾಬ್, ಪ್ರಧಾನ ಕಾರ್ಯದರ್ಶಿ ಟಿ.ಅಶೋಕ್, ಉಪಾಧ್ಯಕ್ಷ ಉಮೇಶ್, ಟಿ.ಅಜ್ಜಣ್ಣ, ಮೂರ್ತಿನಾಯ್ಕ್, ಸಂಘಟನಾ ಕಾರ್ಯದರ್ಶಿ ರಾಮಾಂಜನೇಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ರಾಜಪ್ಪ, ಗೌರವ ಅಧ್ಯಕ್ಷ ಎ.ಕೆ.ಮಹದೇವಪ್ಪ, ಎಸ್.ಸಿ., ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಎನ್.ಪಿ.ರವಿ, ಗೊಲ್ಲಾಳಪ್ಪ ಗೌಡ ಹಾಗೂ ಉಮಾಪತಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!