ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ರಸ್ತೆಗಳು ಕಣ್ಣೀರಿಟ್ಟಿವೆ. ಅಲ್ಲಲ್ಲೇ ನೀರು ನಿಂತಿದ್ದು, ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಅಲ್ಲಲ್ಲೇ ಮರಗಳು ಧರೆಗೆ ಉರುಳಿವೆ. ಇದರಿಂದಾಗಿ ಕೆಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಆಫೀಸಿಗೆ ಹೋಗುವವರಿಗೆ ಕಿರಿಕಿರಿ ಆಗಿದೆ.
ಮೆಜೆಸ್ಟಿಕ್, ಕಲ್ಯಾಣನಗರ, ವಿಲ್ಸನ್ ಗಾರ್ಡನ್, ಗಿರಿನಗರ, ಬಾಣಸವಾಡಿ ಸೇರಿದಂತೆ ಬೆಂಗಳೂರಿನ ವಿವಿಧಡೆ ಮಂಗಳವಾರ ಸಂಜೆ ಹಾಗೂ ರಾತ್ರಿ ಭಾರಿ ಮಳೆ ಸುರಿದಿದೆ. ಪರಿಣಾಮವಾಗಿ 36ಕ್ಕೂ ಹೆಚ್ಚು ಬೃಹತ್ ಮರಗಳು ನೆಲಕ್ಕುರುಳಿದ್ದವು.
ಬಿಬಿಎಂಪಿ 8 ವಲಯದಲ್ಲಿ 36ಕ್ಕೂ ಹೆಚ್ಚು ಮರಗಳು, 121 ಕೊಂಬೆಗಳು ಧರೆಗುರುಳಿದ್ದವು. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲೇ ಹೆಚ್ಚು ಮರಗಳು ಉರುಳಿದ್ದವು, ಇದರಿಂದಾಗಿ ಸಂಚಾರ ದಟ್ಟಣೆಯೂ ಉಂಟಾಗಿತ್ತು.
ಮಳೆ ಅವಾಂತರದಿಂದ ಮಂಗಳವಾರ ರಾತ್ರಿ ಉಂಟಾದ ಸಂಚಾರ ಸಮಸ್ಯೆ ಬುಧವಾರ ಬೆಳಗ್ಗೆಯೂ ಅನೇಕ ಕಡೆ ಸಮಸ್ಯೆ ಸೃಷ್ಟಿಸಿತು. ಬೆಂಗಳೂರಿನ ವಿವಿಧೆಡೆ ಸಂಚಾರ ದಟ್ಟಣೆ, ನಿಧಾನಗತಿಯ ಸಂಚಾರ ಇದ್ದು, ಆ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.