ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಅಕ್ರಮ ರೊಹಿಂಗ್ಯಾ ಮುಸ್ಲಿಂ ವಲಸಿಗರ ಸ್ಥಿತಿಗತಿ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ.
ರೊಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ ಎಂದು ಸರ್ಕಾರವು ತಿಳಿಸಿದೆ. ಅಂತಹ ವ್ಯಕ್ತಿಗಳಿಗೆ ನಿರಾಶ್ರಿತರ ಸ್ಥಾನಮಾನವನ್ನು ನೀಡಲು ಪ್ರತ್ಯೇಕ ವರ್ಗವನ್ನು ರಚಿಸುವಂತೆ ಸಂಸತ್ತು ಮತ್ತು ಕಾರ್ಯಾಂಗದ ಶಾಸಕಾಂಗ ಮತ್ತು ನೀತಿ ನಿಯಮಾವಳಿಗಳಿಗಳಲ್ಲಿ ನ್ಯಾಯಾಂಗವು ಅತಿಕ್ರಮಿಸಬಾರದು ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ಸರ್ಕಾರ, ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ದೇಶದಲ್ಲಿ ವಾಸಿಸುವ ಮತ್ತು ನೆಲೆಸುವ ಹಕ್ಕು ಭಾರತೀಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಕೆಲವು ರೋಹಿಂಗ್ಯಾ ಮುಸ್ಲಿಮರು ನಿರಾಶ್ರಿತರ ಸ್ಥಾನಮಾನವನ್ನು ಪಡೆಯಲು ಪಡೆದಿರುವ UNHCR ನಿರಾಶ್ರಿತರ ಕಾರ್ಡ್‌ಗಳನ್ನು ಭಾರತ ಮಾನ್ಯ ಮಾಡೋದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಭಾರತಕ್ಕೆ ರೋಹಿಂಗ್ಯಾಗಳ ಅಕ್ರಮ ವಲಸೆಯ ಮುಂದುವರಿಕೆ ಮತ್ತು ಭಾರತದಲ್ಲಿ ಅವರ ವಾಸ್ತವ್ಯವು ಸಂಪೂರ್ಣವಾಗಿ ಕಾನೂನುಬಾಹಿರವಾಗಿರುವುದರ ಹೊರತಾಗಿ, ಗಂಭೀರವಾದ ಭದ್ರತಾ ಪರಿಣಾಮಗಳಿಂದ ಕೂಡಿದೆ. ನೆರೆಯ ದೇಶಗಳಿಂದ, ವಿಶೇಷವಾಗಿ ಬಾಂಗ್ಲಾದೇಶದಿಂದ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಂತಹ ಕೆಲವು ಗಡಿ ರಾಜ್ಯಗಳ ಜನಸಂಖ್ಯಾ ಸ್ವರೂಪವೇ ಬದಲಾಗಿದೆ ಎನ್ನುವ ಮೂಲಕ ಇದರಿಂದ ಎದುರಾದ ಸವಾಲುಗಳನ್ನು ಸರ್ಕಾರದ ಅಫಿಡವಿಟ್ ಎತ್ತಿ ತೋರಿಸಿದೆ. ಭಾರತಕ್ಕೆ ರೊಹಿಂಗ್ಯಾಗಳ ನಿರಂತರ ಅಕ್ರಮ ವಲಸೆ, ಕಾನೂನುಬಾಹಿರವಲ್ಲದೆ, ದೇಶಕ್ಕೆ ಗಂಭೀರವಾದ ಭದ್ರತಾ ಸಮಸ್ಯೆಗಳನ್ನೂ ಉಂಟು ಮಾಡುತ್ತದೆ ಎಂದು ಸರ್ಕಾರ ಹೇಳಿದೆ.
ಅನೇಕ ರೋಹಿಂಗ್ಯಾಗಳು ನಕಲಿ,ಕೃತಕ ಭಾರತೀಯ ಗುರುತಿನ ದಾಖಲೆಗಳನ್ನು ಪಡೆಯುವುದು, ಮಾನವ ಕಳ್ಳಸಾಗಣೆ ಮತ್ತು ದೇಶಾದ್ಯಂತ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸೂಚಿಸುವ ಗುಪ್ತಚರ ಮಾಹಿತಿಗಳನ್ನೂ ಅಫಿಡವಿಟ್ ಎತ್ತಿ ತೋರಿಸಿದೆ. ಈ ಚಟುವಟಿಕೆಗಳು ಆಂತರಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿವೆ ಎಂದಿದೆ.
ಅದೇ ರೀತಿ ಬಂಧಿತ ರೋಹಿಂಗ್ಯಾಗಳ ಬಿಡುಗಡೆಗಾಗಿ ಅರ್ಜಿದಾರರಾದ ಪ್ರಿಯಾಲಿ ಸುರ್ ಅವರ ಮನವಿಗೆ ಪ್ರತಿಕ್ರಿಯೆಯಾಗಿ, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವವರ ವಿರುದ್ಧ ವಿದೇಶಿಯರ ಕಾಯಿದೆಯ ನಿಬಂಧನೆಗಳ ಪ್ರಕಾರ ವ್ಯವಹರಿಸಲಾಗುವುದು ಎಂದು ಸರ್ಕಾರ ಪುನರುಚ್ಚಾರ ಮಾಡಿದೆ.
1951 ರ ನಿರಾಶ್ರಿತರ ಸಮಾವೇಶ ಮತ್ತು ನಿರಾಶ್ರಿತರ ಸ್ಥಿತಿಗೆ ಸಂಬಂಧಿಸಿದ ಪ್ರೋಟೋಕಾಲ್‌ಗೆ ಭಾರತವು ಸಹಿ ಹಾಕದ ಕಾರಣ, ತನ್ನದೇ ಆದ ದೇಶೀಯ ಚೌಕಟ್ಟಿನ ಆಧಾರದ ಮೇಲೆ ರೋಹಿಂಗ್ಯಾಗಳ ಸಮಸ್ಯೆಯನ್ನು ನಿಭಾಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ರೊಹಿಂಗ್ಯಾಗಳನ್ನು ಟಿಬೆಟ್ ಮತ್ತು ಶ್ರೀಲಂಕಾದ ನಿರಾಶ್ರಿತರಿಗೆ ಸಮಾನವಾಗಿ ಪರಿಗಣಿಸಬೇಕೆಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ಸರ್ಕಾರ, ಯಾವುದೇ ವರ್ಗದ ವ್ಯಕ್ತಿಗಳನ್ನು ನಿರಾಶ್ರಿತರೆಂದು ಗುರುತಿಸಬೇಕೆ ಅಥವಾ ಇಲ್ಲವೇ ಎಂಬುದು ಸರ್ಕಾರದ ನೀತಿ ನಿರ್ಧಾರವಾಗಿದೆ. ನಿರಾಶ್ರಿತರ ಸ್ಥಾನಮಾನವನ್ನು ಶಾಸಕಾಂಗ ಚೌಕಟ್ಟಿನಿಂದ ಹೊರಗೆ ಗುರುತಿಸಲು ಸಾಧ್ಯವಿಲ್ಲ. ನಿರಾಶ್ರಿತರ ಸ್ಥಾನಮಾನದ ಘೋಷಣೆಯನ್ನು ನ್ಯಾಯಾಂಗ ಆದೇಶದಿಂದ ಮಾಡಲಾಗುವುದಿಲ್ಲ. ಸಮಾನತೆಯ ಹಕ್ಕು ವಿದೇಶಿಯರಿಗೆ ಮತ್ತು ಅಕ್ರಮ ವಲಸಿಗರಿಗೆ ಲಭ್ಯವಿಲ್ಲ’ ಎಂದು ಕೇಂದ್ರ ತಿಳಿಸಿದೆ.