ರಾ.ಸ್ವ.ಸೇ ಸಂಘದ ಬೆಳವಣಿಗೆಯಲ್ಲಿ ಪ್ರಚಾರಕ ರಂಗಾ ಹರಿ ಅವರ ಪಾತ್ರ ಸ್ಮರಣೀಯ: ವಿ. ನಾಗರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ 98 ವರ್ಷಗಳಲ್ಲಿ ಬಹು ಆಯಾಮಗಳಲ್ಲಿ ಬೆಳೆದುಬಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಗ್ರ ಬೆಳವಣಿಗೆಗಳ ಹಿಂದೆ ಸರ್ವ ಸಮರ್ಪಿತರಾದ ಪ್ರಚಾರಕರ ಬೆಂಬಲ ಅಪರಿಮಿತವಾದುದು. ಎಲ್ಲ ಪ್ರಚಾರಕರ ಜೀವನ ಮೇಲ್ನೋಟಕ್ಕೆ ಒಂದೇ ರೀತಿಯಂತೆ ಕಾಣಿಸಿದರೂ, ಪ್ರತಿಯೊಬ್ಬರ ಸಾಧನೆ, ಕೊಡುಗೆಗಳು ಮಹತ್ತರವಾಗಿ ವಿಭಿನ್ನ ಕ್ಷೇತ್ರಗಳಲ್ಲಿ ಹರಡಿಕೊಂಡು ವಿಸ್ತಾರಗೊಂಡಿವೆ. ಇಂತಹ ಪ್ರಚಾರಕರ ಪೈಕಿ ಸ್ವರ್ಗೀಯ ರಂಗಾ ಹರಿಯವರ ಬದುಕು-ಬರಹ ಸ್ಮರಣೀಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರ ಸಂಘಚಾಲಕ, ಮಿಥಿಕ್ ಸೊಸೈಟಿ ಹಾಗೂ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿವಿ. ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಭಾಗವಾಗಿ ನಿನ್ನೆ ಸಂಜೆ ‘ಸ್ವ.ರಂಗಾ ಹರಿ ಅವರ ಧ್ಯೇಯ ಸಮರ್ಪಿತ ಬದುಕು-ಬರಹ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕೇರಳದಲ್ಲಿ ಕಮ್ಯುನಿಸ್ಟ್ ಪ್ರವರ್ಧಮಾನದ 1950ರ ಹೊತ್ತಲ್ಲಿ ಸಂಘವನ್ನು ಅತಿ ಸಂಕೀರ್ಣ ಸ್ಥಿತಿಯಲ್ಲಿ ಕಟ್ಟಿ ಬೆಳೆಸಿದವರು ‘ಹರಿ ಏಟ್ಟನ್’ (ಹರಿ ಅಣ್ಣ) ಎಂದೇ ಕರೆಯಲ್ಪಡುತ್ತಿದ್ದ ರಂಗಾ ಹರಿಯವರಾಗಿದ್ದರು. ಅವರು ಬಾಲ್ಯದಲ್ಲಿ ಹಿರಿಯ ಪ್ರಚಾರಕರಾಗಿದ್ದ ಪುರುಷೋತ್ತಮ ಗೋವಿಂದ ಚಿನ್ಕೋಡ್ಕರ್ ಅವರ ನಿರ್ದೇಶಾನುಸಾರ ಸಂಘ ಶಿಕ್ಷಣ ಪಡೆದು, ಪದವಿ ಶಿಕ್ಷಣದ ಬಳಿಕ ಸಂಪೂರ್ಣ ಸಂಘ ಕೈಂಕರ್ಯಕ್ಕೆ ಜೀವನ ಮುಡಿಪಾಗಿಟ್ಟು ಸುದೀರ್ಘ ವರ್ಷಗಳ ಕಾಲ ಸಂಘದ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸಿದರು. ತಾಲೂಕು, ಜಿಲ್ಲೆ ಹಾಗೂ ವಿಭಾಗ ಪ್ರಚಾರಕರಾಗಿ 1983 ರಿಂದ 1996ರ ವರೆಗೆ ಕೇರಳ ಪ್ರಾಂತ ಪ್ರಚಾರಕರಾಗಿ ತಮ್ಮ ಅನುಪಮ ಸೇವೆ ಸಲ್ಲಿಸಿದವರು. 1996 ರಿಂದ ತಮ್ಮ ಕೊನೆಯುಸಿರಿರುವವರೆಗೂ ಅಖಿಲ ಭಾರತ ಬೌದ್ಧಿಕ್ ಪ್ರಮುಖರಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಜವಾಬ್ದಾರಿಯನ್ನೂ ನಿರ್ವಹಿಸಿ ಸಂಘದ ವಿಸ್ತರಣೆಗೆ ಮಹತ್ವಿಕೆಯ ಕೊಡುಗೆ ನೀಡಿದವರು ರಂಗಾ ಹರಿ ಎಂದು ಅವರು ನೆನಪಿಸಿದರು.

ಕೇರಳದಲ್ಲಿ ಸಂಘಕ್ಕೆ ನಿರಂತರವಾಗಿ ಬಂದೆರಗುತ್ತಿದ್ದ ಸ್ವಯಂಸೇವಕರ ಕೊಲೆ, ಸಂಘರ್ಷದ ಹೊತ್ತಲ್ಲಿ ಸ್ಥೈರ್ಯ, ಶಕ್ತಿ ತುಂಬಿ ಸಮಗ್ರ ಸಮಾಜವನ್ನು ಮುನ್ನಡೆಸುತ್ತಿದ್ದುದು ರಂಗಾ ಹರಿಯವರ ಕರ್ತೃತ್ವದ ಸಂಕೇತವಾಗಿದ್ದು, ಅಖಿಲ ಭಾರತ ಮಟ್ಟದಲ್ಲಿ ಬೌದ್ಧಿಕ್ ಪ್ರಮುಖರಾದ ಬಳಿಕ ಅದಕ್ಕೆ ಹೊಸ ಆಯಾಮ ನೀಡಿ ಬೆಳೆಸಿದ ಹೆಗ್ಗುರುತು ಸದಾ ಅನುಸರಣೀಯ. ಸಾಮಾನ್ಯರ ಮನಸ್ಸಿಗೆ ಸುಲಭ ಗ್ರಾಹ್ಯವಾಗುವಂತೆ ಕಥನಗಳ ಮೂಲಕ ಅವರು ಕಟ್ಟಿಕೊಟ್ಟ ಸಾಹಿತ್ಯ ಪರಂಪರೆ ಸಂಘ ತೋರಿಸಿಕೊಡುವ ರಾಷ್ಟ್ರೀಯತೆ, ಸಂಸ್ಕಾರ ಮತ್ತು ವ್ಯಕ್ತಿತ್ವ ಶುದ್ದತೆಗಳಿಗೆ ಕಳಶಪ್ರಾಯವಾದುದಾಗಿದೆ. ಶ್ರೀಗುರೂಜಿಯವರ ಜನ್ಮಶತಮಾನೋತ್ಸವದ ಹಿನ್ನಲೆಯಲ್ಲಿ ರಚಿತಗೊಂಡ 12 ಸಂಪುಟಗಳ ಮಹದ್ಗ್ರಂಥದ ಸಂಪೂರ್ಣ ಯಶ ಶ್ರೀರಂಗಾ ಹರಿಯವರ ಕರ್ತೃತ್ವ ಶಕ್ತಿಯ ಸಂಕೇತ. ಯಾವುದು ನಮ್ಮ ಜೀವನದ ಧ್ಯೇಯವೋ ಅದು ಸಮರ್ಪಣೆ. ಜೀವನವೆಂಬುದು ವ್ರತವಾಗಿದ್ದು ಅದರಂತೆ ಬದುಕಿ, ಇತರರನ್ನೂ ಬೆಳೆಸಿದವರು ರಂಗಾ ಹರಿಯವರಾಗಿದ್ದರು. ಕೇರಳದಲ್ಲಿ ಸಂಘ ವಿರೋಧಿ ಶಕ್ತಿಗಳ ಘಾಸಿಗೊಳಗಾಗಿ ಕಾಲೆರಡನ್ನೂ ಕಳಕೊಂಡ ಗೋಪಾಲ ಮಾಸ್ತರರಂತವರು ದೈಹಿಕ ನ್ಯೂನತೆಗಳ ನಡುವೆಯೂ ನಿರಂತರ ಸಂಘ ಚಟುವಟಿಕೆಯಲ್ಲಿ ಮುಂದುವರಿಯಲು ಮೂಲ ಪ್ರೇರಕರಾಗಿದ್ದವರು ಶ್ರೀರಂಗಾ ಹರಿಯವರು, ಹಿರಿಯರ ಇಂತಹ ತ್ಯಾಗ, ಬದ್ದತೆಯ ಕೈಂಕರ್ಯ ಭಾರತೀಯ ಪರಂಪರೆಯನ್ನು ಈವರೆಗೂ ಕಟ್ಟಿ ಬೆಳೆಸಿದೆ ಎಂದು ವಿ. ನಾಗರಾಜ್ ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ವಿ. ನಾಗರಾಜ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕರಾದ ವಿಘ್ನೇಶ್ವರ ಭಟ್, ಪ್ರಬಂಧಕರಾದ ಮೋಹನ್, ವಾಯ್ಸ್ ಆಫ್ ಇಂಡಿಯಾ ಕನ್ನಡ ಸರಣಿಯ ಗೌರವ ಸಂಪಾದಕರಾದ ಮಂಜುನಾಥ ಅಜ್ಜಂಪುರ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!