Sunday, September 7, 2025

ಭಾರತದ ಉತ್ಪನ್ನಗಳಿಗೆ ವಿಧಿಸಿದ್ದ ಸುಂಕ ವಾಪಾಸ್? ಈ ಕುರಿತು ಟ್ರಂಪ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ವಿಧಿಸಿರುವ ಸುಂಕದ ಬಗ್ಗೆ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಪರಿಶೀಲನೆ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತದ ಉತ್ಪನ್ನಗಳ ಆಮದಿಗೆ ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕ, ಇದೀಗ ರಷ್ಯಾ ಜೊತೆಗಿನ ಮಾತುಕತೆಯ ನಂತರ ಆ ನಿರ್ಧಾರವನ್ನು ಹಿಂಪಡೆಯಲಿದೆಯೇ? ಇಂಥದ್ದೊಂದು ಅನುಮಾನಕ್ಕೆ ಟ್ರಂಪ್ ಈಗ ನೀಡಿರುವ ಹೇಳಿಕೆ ಕಾರಣವಾಗಿದೆ.

ಕಳೆದ ವಾರವಷ್ಟೇ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಶೇ 25 ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದರು. ಇದರೊಂದಿಗೆ, ಭಾರತದ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕ ವಿಧಿಸಿದ್ದ ಸುಂಕದ ಪ್ರಮಾಣ ಶೇ 50 ತಲುಪಿತ್ತು. ಅಷ್ಟೇ ಅಲ್ಲದೆ, ಪುಟಿನ್ ಜತೆಗಿನ ಮಾತುಕತೆ ವಿಫಲವಾದರೆ ಭಾರತದ ಮೇಲೆ ಮತ್ತೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಟ್ರಂಪ್ ಹೇಳಿದ್ದರು.

ಇದೀಗ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲಿನ ಸುಂಕದ ಬಗ್ಗೆ 2-3 ವಾರಗಳಲ್ಲಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ ಜತೆ ಮಾತುಕತೆ ನಡೆಸಿದ ನಂತರ ಫಾಕ್ಸ್ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಉಕ್ರೇನ್​ ಯದ್ಧವು ಪ್ರಾದೇಶಿಕ ವಿನಾಯಿತಿಗಳೊಂದಿಗೆ ಕೊನೆಗೊಳ್ಳಲಿದೆ ಎಂದಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಭೂ ವಿನಿಮಯ ಏರ್ಪಡಲಿದೆ. ಇದು ಸಹ ನಮ್ಮ ಮಾತುಕತೆಯ ಭಾಗವಾಗಿತ್ತು. ಅದೇ ರೀತಿ, ಉಕ್ರೇನ್​​ಗೆ ಅಮೆರಿಕವು ಸಂಭಾವ್ಯ ಭದ್ರತೆಯ ಖಾತರಿ ಒದಗಿಸುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಆದಾಗ್ಯೂ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆಗಿನ ಮಾತುಕತೆಯ ನಂತರವೇ ಇದು ಅಂತಿಮಗೊಳ್ಳಲಿದೆ. ಅವರು ಈ ಒಪ್ಪಂದಕ್ಕೆ ಒಪ್ಪದೆ ಇರಲೂಬಹುದು. ಆದರೆ, ಒಪ್ಪಂದಕ್ಕೆ ಉಕ್ರೇನ್ ಒಪ್ಪಿಕೊಳ್ಳಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ