ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್ಲೈನ್ ವಂಚನೆ ಪ್ರಕರಣಗಳು ಮತ್ತೊಂದು ಹೊಸ ರೂಪ ಪಡೆದುಕೊಂಡಿದೆ. ಡೇಟಿಂಗ್ ಆಪ್ನಲ್ಲಿ ಪರಿಚಯವಾದ ಮಹಿಳೆ ಮದುವೆಯ ಭರವಸೆ ನೀಡಿ, ನಂತರ ಆನ್ಲೈನ್ ಹೂಡಿಕೆ ಹೆಸರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ನಿಂದ ₹18.7 ಲಕ್ಷಕ್ಕೂ ಹೆಚ್ಚು ಹಣ ಪಡೆದು ಮೋಸ ಮಾಡಿದ ಘಟನೆ ನ್ಯೂ ತಿಪ್ಪಸಂದ್ರದಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣ ನಗರದಲ್ಲಿ ಹೆಚ್ಚುತ್ತಿರುವ ರೊಮ್ಯಾನ್ಸ್-ಇನ್ವೆಸ್ಟ್ಮೆಂಟ್ ಸ್ಕ್ಯಾಮ್ಗಳತ್ತ ಮತ್ತೆ ಗಮನ ಸೆಳೆದಿದೆ.
ವರದಿಗಳ ಪ್ರಕಾರ, 29 ವರ್ಷದ ಎಂಜಿನಿಯರ್ಗೆ ಕಳೆದ ನವೆಂಬರ್ನಲ್ಲಿ ಡೇಟಿಂಗ್ ಆಪ್ ಮೂಲಕ ಮಹಿಳೆಯೊಬ್ಬಳ ಪರಿಚಯವಾಗಿತ್ತು. ತಾನು ಮುಂಬೈ ಮೂಲದವಳೆಂದು ಹೇಳಿಕೊಂಡ ಮಹಿಳೆ, ಬಳಿಕ ವಾಟ್ಸಾಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಭಾವನಾತ್ಮಕವಾಗಿ ನಂಬಿಕೆ ಗಳಿಸಿದ್ದಳು. ಕೆಲವೇ ದಿನಗಳಲ್ಲಿ ಮದುವೆ ಮಾತು ಮುಂದಿಟ್ಟುಕೊಂಡು ಆನ್ಲೈನ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾಳೆ. ಆರಂಭದಲ್ಲಿ ₹40 ಸಾವಿರ ಹೂಡಿಕೆ ಮಾಡಿದ ಎಂಜಿನಿಯರ್ಗೆ ಸಣ್ಣ ಮಟ್ಟಿನ ಲಾಭ ತೋರಿಸಿ ಹೆಚ್ಚಿನ ವಿಶ್ವಾಸ ಮೂಡಿಸಲಾಗಿದೆ.
ಇದನ್ನೂ ಓದಿ:
ನಂತರ ಹಂತ ಹಂತವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿಸಿದ ಆರೋಪಿಯು, ಸಾಲ ಪಡೆದು ಹಣ ಹಾಕುವಂತೆ ಒತ್ತಾಯಿಸಿದ್ದಾಳೆ. ಡಿಸೆಂಬರ್ ವೇಳೆಗೆ ಒಟ್ಟು ಮೊತ್ತ ₹18.7 ಲಕ್ಷಕ್ಕೆ ಏರಿದ್ದು, ಅದರಲ್ಲಿ ₹10 ಲಕ್ಷ ಸಾಲದ ಹಣವಾಗಿರುವುದು ತಿಳಿದುಬಂದಿದೆ.
ಹಣವನ್ನು ಹಿಂದಕ್ಕೆ ಪಡೆಯಲು ಯತ್ನಿಸಿದಾಗ ಮಹಿಳೆ ಸಂಪರ್ಕ ಕಡಿತಗೊಳಿಸಿದ್ದಾಳೆ. ಮೋಸ ಹೋಗಿರುವುದು ತಿಳಿದ ಬಳಿಕ ಸಂತ್ರಸ್ತನು ಪೂರ್ವ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.



