ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (SLBC) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದು ಕನಿಷ್ಠ 8 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 48 ಕಾರ್ಮಿಕರನ್ನು ರಕ್ಷಿಸಲಾಗಿದೆ.
ನಾಗರ್‌ಕರ್ನೂಲ್ ಜಿಲ್ಲೆಯ ಅಮ್ರಾಬಾದ್‌ನಿಂದ ಸುರಂಗ ನಿರ್ಮಾಣವಾಗುತ್ತಿದೆ. ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದೆ. ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿದೆ. ಈ ಪೈಕಿ ಮೂವರು ತಪ್ಪಿಸಿಕೊಂಡಿದ್ದು, ಕನಿಷ್ಠ 8 ಮಂದಿ ಸುರಂಗದಲ್ಲಿ ಸಿಲುಕಿರುವ ಶಂಕೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸದ್ಯ ಸುರಂಗ ನಿರ್ಮಾಣ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಸುರಂಗದಲ್ಲಿ 12-13 ಕಿಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಆದ್ರೆ ಈಗಲೇ ನಿಖರವಾದ ಅಂಕಿ-ಅಂಶ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.