January15, 2026
Thursday, January 15, 2026
spot_img

50ಕ್ಕೂ ಹೆಚ್ಚು ಪ್ರಕರಣಗಳ ರೌಡಿಶೀಟರ್ ಸೆರೆ: ಉಮ್ಮಚಗಿ ಬ್ಯಾಂಕ್ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಹೊಸದಿಗಂತ ಯಲ್ಲಾಪುರ:

ತಾಲೂಕಿನ ಉಮ್ಮಚಗಿ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿ, ನಂತರ ಬ್ಯಾಂಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುಖ್ಯಾತ ಗ್ಯಾಂಗ್‌ನಿಂದ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ನಡೆದ ಹಲವು ಅಪರಾಧ ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ ಇದೆ.

ಬಂಧಿತ ಆರೋಪಿಗಳ ವಿವರ:

ಬಂಟ್ವಾಳದ ಬಿ.ಸಿ. ರೋಡ್‌ನ ಮಹ್ಮದ್ ರಫೀಕ್, ಹುಕ್ಕೇರಿಯ ಗುಲ್ಟಾರ್ ಅಬ್ದುಲ್ ರೆಹಮಾನ್ ಮಕಾಂದಾರ್ ಮತ್ತು ಬೈಲಹೊಂಗಲದ ಇಮ್ರಾನ್ ಕುತುಬುದ್ದೀನ್ ತಿಗಡಿ ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಮುಖ ಆರೋಪಿಯ ಹೈಡ್ರಾಮಾ:

ಇವರಲ್ಲಿ ಪ್ರಮುಖ ಆರೋಪಿಯಾದ ಮಹ್ಮದ್ ರಫೀಕ್ ಬಂಧನದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದು, ನಂತರ ತನ್ನನ್ನು ತಾನೇ ಚಾಕುವಿನಿಂದ ಇರಿದುಕೊಂಡು ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರಫೀಕ್ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳು ವಿಚಾರಣೆ ವೇಳೆ ತಾವು ಕಳ್ಳತನಕ್ಕೆ ವಿಫಲರಾದ ನಂತರವೇ ಬ್ಯಾಂಕಿಗೆ ಬೆಂಕಿ ಹಚ್ಚಿರುವುದುನ್ನು ಒಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯಲ್ಲಾಪುರ ಸಿಪಿಐ ರಮೇಶ ಹಾನಾಪುರ ಅವರ ನೇತೃತ್ವದಲ್ಲಿ ಈ ಯಶಸ್ವಿ ಬಂಧನ ಕಾರ್ಯಾಚರಣೆ ನಡೆದಿದೆ. ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವಿರ ಕಾಂಬ್ಳೆ ಹಾಗೂ ಸಿಬ್ಬಂದಿಗಳಾದ ದೀಪಕ ನಾಯ್ಕ, ಮಹ್ಮದ್ ಶಫೀ ಶೇಖ್, ಬಸವರಾಜ ಹಗರಿ, ಶೋಭಾ ನಾಯ್ಕ, ಗಿರೀಶ್ ಲಮಾಣಿ, ಸಂತೋಷ ಬಾಳೇರ, ಮಹಾವೀ‌ರ್ ಡಿ., ಎಸ್.ಪರಮೇಶ್ವರ, ಪರಶುರಾಮ ದೊಡ್ಮನಿ, ಉದಯ ಗುನಗಾ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Most Read

error: Content is protected !!