ಹೊಸದಿಗಂತ ಬೆಳಗಾವಿ:
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಪ್ರೀತಿ ಹಾಗೂ ಮದುವೆಯ ಹೆಸರಿನಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿ, ಆಕೆಯ ಕುಟುಂಬದ ಮೇಲೆ ಭೀಕರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಕಳೆದ ಎರಡು ವರ್ಷಗಳಿಂದ ಬೀರಪ್ಪ ರಾಮಪ್ಪ ಕಜ್ಜನ್ನವರ ಎಂಬಾತ ವಿದ್ಯಾಶ್ರೀ ಕಿಲಾರಿ ಎಂಬ ಯುವತಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದನು. ಆದರೆ ಯುವತಿ ಮತ್ತು ಆಕೆಯ ಕುಟುಂಬದವರು ಈ ಪ್ರಸ್ತಾಪವನ್ನು ಕಡಾಖಂಡಿತವಾಗಿ ನಿರಾಕರಿಸಿದ್ದರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ, ನಿನ್ನೆ ರಾತ್ರಿ ಯುವತಿ ದಾರಿಯಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಮನಬಂದಂತೆ ಥಳಿಸಿದ್ದಾನೆ.
ಅಷ್ಟಕ್ಕೇ ನಿಲ್ಲದ ಈತನ ಅಟ್ಟಹಾಸ, ಬಳಿಕ ಹತ್ತಾರು ಜನರ ಗುಂಪಿನೊಂದಿಗೆ ಯುವತಿಯ ಮನೆಗೆ ನುಗ್ಗಿ ರಂಪಾಟ ಮಾಡಿದ್ದಾನೆ. ಯುವತಿಯ ತಂದೆ ಮಹಾದೇವ ಕಿಲಾರಿ, ತಾಯಿ ಸೇರಿದಂತೆ ಕುಟುಂಬದ ಐವರು ಸದಸ್ಯರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಐವರನ್ನು ತಕ್ಷಣವೇ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಬೀರಪ್ಪ ಹಾಗೂ ಆತನ ತಂಡದ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.



