ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ರಾಮನಗುಳಿ ಕೆಲವು ದಿನಗಳ ಹಿಂದೆ ಬಳಿ ಕಾರಿನಲ್ಲಿ ಸುಮಾರು ಒಂದು ಕೋಟಿ ಹದಿನೈದು ಲಕ್ಷ ರೂಪಾಯಿ ಹಣ ದೊರಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆ ಪ್ರಕರಣ ದಾಖಲಾಗಿದ್ದು
ಹಣ ದೊರಕಿರುವ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನವರಿ 28 ರಂದು ರಾಷ್ಟ್ರೀಯ ಹೆದ್ದಾರಿ 54 ಅಂಕೋಲಾ ಹುಬ್ಬಳ್ಳಿ ರಸ್ತೆಯ ರಾಮನಗುಳಿ ಬಳಿ ಒಳ ರಸ್ತೆಯಲ್ಲಿ ಬಿಳಿ ಬಣ್ಣದ ಕ್ರೇಟಾ ವಾಹನದ ಹಿಂಬದಿ ಸೀಟಿನ ಅಡಿಯಲ್ಲಿ ಇರುವ ಪೆಟ್ಟಿಗೆಯಲ್ಲಿ 1,14,99500 ನಗದು ಪತ್ತೆಯಾಗಿತ್ತು, ನಗದು ಹಣ ದೊರಕಿರುವ ಕಾರಿನ ನೋಂದಣಿ ಸಂಖ್ಯೆ ಬದಲಾಯಿಸಿರುವುದು ಮತ್ತು ಕಾರಿನ ಗಾಜುಗಳನ್ನು ಒಡೆದು ಹಾನಿ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿತ್ತಲ್ಲದೇ ಕೋಟಿ ಹಣದ ವಾರಸುದಾರರು ಯಾರೂ ಬಾರದಿರುವುದು ಈ ಹಣ ಯಾವ ಉದ್ದೇಶದಿಂದ ಸಾಗಿಸಲಾಗುತಿತ್ತು ಎನ್ನುವ ಕುತೂಹಲಕ್ಕೆ ಕಾರಣವಾಗಿತ್ತು.
ಕಾರಿನ ಚೆಸ್ಸಿ ನಂಬರ್ ಮೂಲಕ ಕಾರು ಮಂಗಳೂರಿನ ಆಳ್ಕೆಯಲ್ಲಿ ವಾಸವಾಗಿರುವ ಮಹಾರಾಷ್ಟ್ರದ ಖಾನಾಪುರ ಮೂಲದ ಬಂಗಾರದ ಆಭರಣಗಳ ತಯಾರಕ ವಿವೇಕ ಸುರೇಶ ಪವಾರ್(26) ಎನ್ನುವವರಿಗೆ ಸೇರಿದ್ದು ಎಂದು ತಿಳಿದು ಬಂದಿತ್ತು. ಇದೀಗ ವಿವೇಕ ಪವಾರ್, ಮಂಗಳೂರು ಕಾರ್ ಸ್ಟ್ರೀಟ್ ನಿವಾಸಿ ರಾಜೇಂದ್ರ ಪ್ರಕಾಶ್ ಪವಾರ್, ಮಂಗಳೂರು ಪುಣಚ ನಿವಾಸಿ ಅಬ್ದುಲ್ ಸಮದ್ ಅಂದುನಿ ಮತ್ತು ಮಂಗಳೂರು ಜಿಪ್ಪು ಕುಡಪಾಡಿ ನಿವಾಸಿ ಮಹಮ್ಮದ್ ಇಸಾಕ್ ಎನ್ನುವವರು ಅಂಕೋಲಾ ಪೊಲೀಸ್ ಠಾಣೆಗೆ ಹಾಜರಾಗಿದ್ದು ದರೋಡೆ ಕುರಿತಂತೆ ದೂರು ದಾಖಲಿಸಿದ್ದಾರೆ.
ಮಂಗಳೂರಿನ ರಾಜೇಂದ್ರ ಪವಾರ್ ಅವರ ಕಾರು ಚಾಲಕ ಮಹಮ್ಮದ್ ಇಸಾಕ್ ಅವರು ರಾಜೇಂದ್ರ ಅವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಆಕಾಶ ಪವಾರ್ ಅವರ ಸೂಚನೆಯಂತೆ ಬೆಳಗಾವಿಯ ಸಚಿನ್ ಜಾದವ್ ಎನ್ನುವವರಿಗೆ ಬಂಗಾರ ತಲುಪಿಸಿ ಅವರಿಂದ ಹಣ ತರಲು ಇನ್ನೋರ್ವ ಚಾಲಕ ಅಬ್ದುಲ್ ಸಮದ್ ಅವರ ಜೊತೆ ಜನವರಿ 26 ರಂದು ಬೆಳಿಗ್ಗೆ 3.45 ಗಂಟೆಗೆ ಕೆ.ಎ19ಎಂ.ಪಿ1036 ನಲ್ಲಿ ಹೊರಟಿದ್ದು ಸೀಟಿನ ಕೆಳಗೆ ಇರುವ ಲಾಕರ್ ನಲ್ಲಿ ಬಂಗಾರ ಇಟ್ಟು ಕಾರಿನ ನಂಬರ್ ಪ್ಲೇಟ್ ಬದಲಾಯಿಸಿ ಕೆ.ಎ51ಎಂ.ಬಿ9634 ನಂಬರ್ ಪ್ಲೇಟ್ ಅಳವಡಿಸಿ ಬೆಳಗಾವಿಗೆ ಹೊರಟಿದ್ದು ಬೆಳಿಗ್ಗೆ 11.30 ಸುಮಾರಿಗೆ ಬೆಳಗಾವಿ ತಲುಪಿದ್ದು ಅಲ್ಲಿ ತುಷಾರ್ ಎನ್ನುವವರು ಬಂದು 2 ಕೋಟಿ 95 ಲಕ್ಷ ಹಣವನ್ನು ನೀಡಿ ಬಂಗಾರ ತೆಗೆದುಕೊಂಡು ಹೋಗಿದ್ದರು.
ಅವರು ನೀಡಿರುವ ನಗದು ಹಣದಲ್ಲಿ 1ಕೋಟಿ 80 ಲಕ್ಷ ಹಣವನ್ನು ಡ್ರೈವರ್ ಕೆಳಗಡೆ ಸೀಟಿನ ಅಡಿಯಲ್ಲಿ ಮತ್ತು 1ಕೋಟಿ 15 ಲಕ್ಷ ಹಣವನ್ನು ಹಿಂಬದಿ ಸೀಟಿನ ಅಡಿಯಲ್ಲಿ ಲಾಕರ್ ನಲ್ಲಿ ಇಟ್ಟು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಯಲ್ಲಾಪುರ ದಾಟಿ ಅಂಕೋಲಾ ಕಡೆ ಬರುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಬಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಓವರ್ ಟೇಕ್ ಮಾಡಿ ಬಂದ ಐದು ಜನ ಅಪರಿಚಿತ ವ್ಯಕ್ತಿಗಳು ತಲವಾರ್, ಚಾಕು ಹಿಡಿದು ಅಡ್ಡಗಟ್ಟಿ ಕಾರಿನ ಗಾಜುಗಳನ್ನು ಒಡೆದು ಇಬ್ಬರು ಚಾಲಕರ ಮೊಬೈಲ್ ಮತ್ತು ಪರ್ಸ್ ಕಸಿದು ಕಾರನ್ನು ಅಪಹರಿಸಿ ಚಾಲಕನ ಸೀಟಿನ ಅಡಿ ಇದ್ದ 1ಕೋಟಿ 75 ಲಕ್ಷ ಹಣವನ್ನು ದರೋಡೆ ಮಾಡಿ ತೆರಳಿ ರಾಮನಗುಳಿ ಬಳಿ ಕಾರನ್ನು ಬಿಟ್ಟು ತೆರಳಿದ್ದು ದರೋಡೆ ಪ್ರಕರಣದಿಂದ ಹೆದರಿದ ತಾವು ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ಪಿರ್ಯಾದಿಗಳು ದೂರಿನಲ್ಲಿ ತಿಳಿಸಿದ್ದಾರೆ.
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ. ಜಿ, ಜಗದೀಶ.ಎಂ, ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ದರೋಡೆ ಆರೋಪಿಗಳ ಪತ್ತೆಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.