Thursday, September 11, 2025

3 ರೂಪಾಯಿಗಾಗಿ ಗ್ರಾಹಕ ವೇದಿಕೆಗೆ ಕಾಲಿಟ್ಟ ಮಹಿಳೆಗೆ 3 ಸಾವಿರ ರೂ. ಪರಿಹಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇವಲ 3 ರೂಪಾಯಿ ಪರಿಹಾರಕ್ಕಾಗಿ ಮಹಿಳೆಯೊಬ್ಬರು ಜಿಲ್ಲಾ ಗ್ರಾಹಕ ವೇದಿಕೆಯ ಮೊರೆ ಹೋಗಿದ್ದಾರೆ. ಇವರ ಮನವಿ ಆಲಿಸಿದ ವೇದಿಕೆ 3,000 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಇಂಥದ್ದೊಂದು ಅಪರೂಪದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಜೈರಾ ಅಮಿನಾ ಎಂಬವರೇ ಗ್ರಾಹಕ ವೇದಿಕೆಯ ಮೊರೆ ಹೋಗಿ 3,000 ರೂಪಾಯಿ ಪರಿಹಾರ ಪಡೆದ ಮಹಿಳೆ. ಇದು ಮೇಲ್ನೋಟಕ್ಕೆ ಅಚ್ಚರಿ ಅನ್ನಿಸಬಹುದು. ಅಲ್ಲದೇ, 3 ರೂ.ಗೆ ಕೋರ್ಟ್​ಗೆ ಹೇಗಬೇಕಿತ್ತಾ? ಎಂಬ ಪ್ರಶ್ನೆಗಳೂ ಹುಟ್ಟಬಹುದು. ಆದರೆ, ಜನರು ಕಾಲ ಕಳೆದಂತೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುತ್ತಿದ್ದಾರೆ ಅನ್ನೋದಕ್ಕೆ ಇದೊಂದು ಉದಾಹರಣೆ. ಎಷ್ಟೋ ಜನ ಸಾಮಾನ್ಯವಾಗಿ ಸಣ್ಣ ಮೊತ್ತವೆಂದು ನಿರ್ಲಕ್ಷಿಸುತ್ತಾರೆ. ಆದರೆ, ಕಾನೂನಿನ ಕಾಳಜಿಯನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎನ್ನುತ್ತಾರೆ ಜೈರಾ ಅಮಿನಾ.

ಬಿಲಾಸ್ಪುರದ 21 ವರ್ಷದ ಜೈರಾ ಅಮಿನಾ ಅವರು ಅಂಗಡಿಯೊಂದರಿಂದ 235 ರೂ. ಮೌಲ್ಯದ ಚಹಾ ಎಲೆಗಳಿದ್ದ ಪ್ಯಾಕೇಟ್​ ಖರೀದಿಸಿದ್ದರು. ಈ ಪ್ಯಾಕೇಟ್​ಗೆ ಬಿಲ್ಲಿಂಗ್ ಸಮಯದಲ್ಲಿ, ಅವರಿಗೆ 238 ರೂ. ಶುಲ್ಕ ವಿಧಿಸಲಾಗಿತ್ತು. MRPಗಿಂತ ಹೆಚ್ಚುವರಿ ಶುಲ್ಕ ವಿಧಿಸಿದ್ದನ್ನು ಜೈರಾ ಪ್ರಶ್ನಿಸಿದಾಗ ನಿರ್ಲಕ್ಷ್ಯ ಮಾಡಿದ್ದಲ್ಲದೇ, ಸರಿಯಾಗಿ ಸ್ಪಂದಿಸಿರಲಿಲ್ಲ. ಇದರಿಂದ ಜೈರಾ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿದ್ದರು. ಬಿಲ್ ಸಮೇತ ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ವೇಳೆ ಗ್ರಾಹಕರ ವೇದಿಕೆ ಇದು “ಅನ್ಯಾಯವಾದ ವ್ಯಾಪಾರ ಪದ್ಧತಿ ಮತ್ತು ಸೇವೆಯಲ್ಲಿನ ಕೊರತೆ”ಯ ಪ್ರಕರಣ ಎಂದು ತೀರ್ಪು ನೀಡಿದೆ.

ಕಂಪನಿಗೆ ಹೆಚ್ಚುವರಿಯಾಗಿ ವಿಧಿಸಲಾದ 3 ರೂ.ಗಳನ್ನು ಗ್ರಾಹಕರಿಗೆ ಮರುಪಾವತಿಸಲು ಆದೇಶಿಸಿದ ಗ್ರಾಹಕ ವೇದಿಕೆ, 2,000 ರೂಪಾಯಿಗಳನ್ನು ಪರಿಹಾರವಾಗಿ ಮತ್ತು 1,000 ರೂಪಾಯಿಗಳನ್ನು ಮೊಕದ್ದಮೆ ವೆಚ್ಚವಾಗಿ ಪಾವತಿಸುವಂತೆ ಆದೇಶಿಸಿದೆ.

ಇದನ್ನೂ ಓದಿ