ಕೆ. ವಿ. ತಿರುಮಲೇಶ್ ನಿಧನಕ್ಕೆ ಆರೆಸ್ಸೆಸ್ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿದ್ದ ಕೆ.ವಿ. ತಿರುಮಲೇಶ್ ಅವರ ನಿಧನದ ಸುದ್ದಿ ಅತ್ಯಂತ ದುಃಖಕರ ಸಂಗತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಸಂತಾಪ ಸೂಚಿಸಿದ್ದಾರೆ.
.
ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಕನ್ನಡಕ್ಕಾಗಿ ದುಡಿದವರು ಕೆ. ವಿ. ತಿರುಮಲೇಶ್. ಓರ್ವ ಕಥೆಗಾರನಾಗಿ ತಮ್ಮ ಎಂದಿನ ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ಗಂಭೀರವಾದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸವಾಲುಗಳ ಸಂಕೀರ್ಣತೆಯನ್ನು ಎಳೆಎಳೆಯಾಗಿ ಬಿಚ್ಚಿಡುವ ಅವರ ಸಾಹಿತ್ಯದ ಪರಿ ಅನನ್ಯವಾದದ್ದು ಎಂದಿದ್ದಾರೆ.

ಜೀವನ ಪ್ರೀತಿಯ ಸೆಲೆಯಾಗಿದ್ದ ಅವರ ಚಿಂತನೆಗಳಲ್ಲಿ ವಿಶ್ವಪ್ರಜ್ಞೆ, ಅಪಾರ ಜ್ಞಾನ, ಆಳವಾದ ಅನುಭವ, ಪ್ರಾಚೀನ ದರ್ಶನಗಳ ಹೊಳಹುಗಳನ್ನೂ ಕಾಣಬಹುದು. ಜಗತ್ತಿನ ಒಳ್ಳೆಯ ವಿಚಾರಗಳ ಗಾಳಿ ಕನ್ನಡಕ್ಕೂ ಬರಲಿ ಎಂದು ಅನುವಾದದ ಕಿಟಕಿ ತೆರೆದವರು ತಿರುಮಲೇಶ ಅವರು. ಕನ್ನಡ ಸಾಹಿತ್ಯ-ಸಾರಸ್ವತ ಲೋಕಕ್ಕೆ ಅವರ ಸೇವೆ ಸದಾ ಸ್ಮರಣೀಯವಾದುದು.

ಅವರ ದೇಹಾಂತ್ಯವು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದೇನೆ ಎಂದು ವಿ.ನಾಗರಾಜ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here