ಹೊಸದಿಗಂತ ಡಿಜಿಟಲ್ ಡೆಸ್ಕ್ :
ಹುಬ್ಬಳ್ಳಿ: ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರ ಮನನ ನಿರಂತರ ಹಾಗೂ ತಾಲೂಕು-ಗ್ರಾಮಮಟ್ಟಗಳಲ್ಲಿ ನಡೆಯಬೇಕು ಎಂದು ಆರ್ ಎಸ್ ಎಸ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೀರ ಹೇಳಿದರು.
ನಗರದ ಆರ್ ಎಸ್ ಎಸ್ ಕಚೇರಿ ಕೇಶವಕುಂಜ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್ ಹಾಗೂ ಸಾಮರಸ್ಯ ವೇದಿಕೆಯಿಂದ ನಡೆದ ಡಾ. ಅಂಬೇಡ್ಕರ್ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ವಿಚಾರ ಅನುಷ್ಠಾನಕ್ಕೆ ತರುವಲ್ಲಿ ಆರ್ ಎಸ್ ಎಸ್ ಮೌನ ಕ್ರಾಂತಿಯಂತೆ ಕಾರ್ಯನಿರ್ವಹಿಸುತ್ತಿದೆ. ಮೀಸಲಾತಿ ಸಮುದಾಯ ಸಾಕು ಎನುವ ತನಕ ಮೀಸಲಾತಿ ಮುಂದುವರೆಯಬೇಕು ಅಂದಾಗ ನಿರ್ದಿಷ್ಟ ಸಮುದಾಯದ ಏಳಿಗೆ ಸಾಧ್ಯ. ಸಾಮರಸ್ಯ ತರುವಲ್ಲಿ ನೂರಾರು ಅಂತರ್ಜಾತಿ ವಿವಾಹವನ್ನು ಸಂಘದ ಕಾರ್ಯಕರ್ತರೆ ಮಾಡಿಕೊಂಡಿದ್ದಾರೆ. ಬಾಳಾಸಾಹೇಬ ದೇವರಸ್ ಅವರು ಉಲ್ಲೇಖಿಸಿದಂತೆ ನಿರ್ದೋಷ ಸಮಾಜ ನಿರ್ಮಾಣವಾಗಬೇಕು ಅಂದಾಗ ಸಾಮರಸ್ಯ ಮೂಡಿಸಲು ಸಾಧ್ಯ ಎಂದು ಹೇಳಿದರು.
ಸಂಕಿರಣ ಸಂಚಾಲನಾ ಸಮಿತಿ ಅಧ್ಯಕ್ಷ ಜಿ.ಬಿ. ನಂದನ ಮಾತನಾಡಿ, ದೇಶ ಏನೆಂಬುದನ್ನು ಮೊದಲು ನಾವು ಅರ್ಥೈಸಿಕೊಳ್ಳಬೇಕು. ಭಾರತದಲ್ಲಿ ಅತ್ಯಂತ ದೊಡ್ಡ ಸಂವಿಧಾನವಿದ್ದರೂ ನಮ್ಮಲ್ಲಿ ಇನ್ನೂ ಒಮ್ಮತವಿಲ್ಲ. ಹಾಗಾಗಿ ಸಂವಿಧಾನ ತಿದ್ದುಪಡಿ ಆಗುತ್ತಲೇ ಇದೆ. ರಾಷ್ಟ್ರ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ಎಲ್ಲ ಸಮಸ್ಯೆಗೆ ಪರಿಹಾರ ಕಾಣಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಸಾಬಣ್ಣ ತಳವಾರ, ಲೋಕಹಿತ ಟ್ರಸ್ಟ್ ಅಧ್ಯಕ್ಷ ಹಾಗೂ ಪ್ರಾಂತ ಸಹ ಸಂಘಚಾಲಕ ಅರವಿಂದರಾವ್ ದೇಶಪಾಂಡೆ ಇತರರು ಪಾಲ್ಗೊಂಡಿದ್ದರು.