ಕಲಬುರಗಿಯ ಲಾಲ್ ಹನುಮಾನ್ ಉಪನಗರದಲ್ಲಿ ಆರ್​ಎಸ್​ಎಸ್​ ಪಥಸಂಚಲನ

ಹೊಸದಿಗಂತ ವರದಿ,ಕಲಬುರಗಿ:

ಸನಾತನ ಧರ್ಮದ ಉಳಿವಿಗಾಗಿ ಇಂದಿನ ಯುವ ಪೀಳಿಗೆಯೂ ರಾಷ್ಟ್ರೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು,ರಾಷ್ಟ್ರ ಸೇವೆಗಾಗಿ ತಮ್ಮ ಸಮಯವನ್ನು ಮೀಸಲಿಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಭೌದ್ಧಿಕ ಪ್ರಮುಖರಾದ ನಾಗರಾಜ್ ಮಠಪತಿ ತಿಳಿಸಿದರು.

ಅವರು ಭಾನುವಾರ ಕೈಲಾಸ ನಗರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ಲಾಲ್ ಹನುಮಾನ್ ಉಪನಗರದ ಪಥಸಂಚಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಸ್ಯೆಗಳು ಸಾವಿರಾರು ಇದ್ದು, ಅದಕ್ಕೆಲ್ಲಾ ಸಂಘಟನೆಯೊಂದೆ ಉತ್ತರವಾಗಬೇಕು ಎಂದು ಹೇಳಿದರು.

೧೯೨೫ರಲ್ಲಿ ಪರಮ ಪೂಜನೀಯ ಡಾಕ್ಟರ್ ಜೀ ಅವರು ೧೭ ಜನರೊಂದಿಗೆ ಸ್ಥಾಪನೆ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು,ಇಂದು ಇಡೀ ವಿಶ್ವದಾದ್ಯಂತ ಹೆಮ್ಮರವಾಗಿ ಬೆಳೆದು ನಿಂತಿದೆ. ನೂರು ವರುಷಗಳ ತುಂಬುವ ಹೊಸ್ತಿಲಲ್ಲಿ ಬಂದು ನಿಂತಿರುವ ಸಂಘದಲ್ಲಿ, ದಿನನಿತ್ಯ ರಾಷ್ಟ್ರ ನಿರ್ಮಾಣದ ಜೊತೆ ಜೊತೆಗೆ ವ್ಯಕ್ತಿ ನಿರ್ಮಾಣದ ಕಾರ್ಯವು ನಡೆಯುತ್ತಲಿದೆ ಎಂದು ಹೇಳಿದರು.

ಪ್ರಾರಂಭದದಲ್ಲಿ ಹಿಂದೂ ಎಂದು ಹೇಳಿಕೊಳ್ಳಲು ಮುಜುಗರಕ್ಕೆ ಒಳಗಾಗುತಿದ್ದೇವೂ, ಆದರೆ, ಕಾಲ ಕಾಲಕ್ಕೆ ಹಿಂದೂ ಸಂಘಟಿತನಾಗಿ ಇಂದು ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾನೆ. ಸಂಘದ ಅಂಗಳದಲ್ಲಿ ಶರೀರ, ಮನಸ್ಸು ಹಾಗೂ ಬುದ್ಧಿ ಈ ಮೂರು ಶಿಕ್ಷಣವನ್ನು ದಿನನಿತ್ಯದ ಒಂದು ಗಂಟೆಯ ಶಾಖೆಯಲ್ಲಿ ಕಲಿಸಲಾಗುತ್ತಿದ್ದು, ನಾವೆಲ್ಲರೂ ದಿನದ ೨೪ ಗಂಟೆಗಳಲ್ಲಿನ ಸಮಯದಲ್ಲಿ ಕನಿಷ್ಠ ಒಂದು ಗಂಟೆಯಾದರೂ ರಾಷ್ಟ್ರ ಸೇವೆಗಾಗಿ ಮೀಸಲಿಡಬೇಕು ಎಂದು ತಿಳಿಸಿದ ಅವರು, ಪರಿಸರ ಸಂರಕ್ಷಣೆ ಹಾಗೂ ಸಮಾಜವನ್ನು ಜೋಡಿಸುವ ಕೆಲಸಕ್ಕೆ ನಾವೆಲ್ಲರೂ ಅಣಿಯಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಭೋಗೆಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲಕ್ಷ್ಮೀಪುತ್ರ ರಾಂಪೂರೆ ಮಾತನಾಡಿ, ಸಂಘದೊಳಗಿನ ಶಿಸ್ತು, ಕಟ್ಟುನಿಟ್ಟಿನ ಪಾಲನೆ ಇಡೀ ವಿಶ್ವವೇ ಶ್ಲಾಘಿಸುತ್ತಿರುವ ಈ ಐತಿಹಾಸಿಕ ಕಾಯಕ್ರಮದಲ್ಲಿ ನಾನು ಭಾಗಿಯಾಗಿದ್ದು, ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಸಮಾಜ ಸೇವೆಯನ್ನು ತನ್ನ ಮೂಲ ಕಾರ್ಯ ಮಾಡಿಕೊಂಡ ಸಂಘದ ಕುರಿತು ಎಷ್ಟು ಹೇಳಿದರೂ ಸಾಲದು. ನಿಸ್ವಾರ್ಥ ಮನೋಭಾವದಿಂದ ಸ್ವಯಂಸೇವಕರು ಆಪತ್ತಿನ ಕಾಲದಲ್ಲಿ ಧುಮುಕಿ ಸೇವೆ ಸಲ್ಲಿಸುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಇದಕ್ಕೂ ಮುನ್ನ ಲಾಲ್ ಹನುಮಾನ್ ಮಂದಿರದಿಂದ ಆರಂಭವಾದ ಪಥಸಂಚಲನವು ಮರಗಮ್ಮಾ ದೇವಸ್ಥಾನ, ರಾಮ ಮಂದಿರ, ಖಟಗರ್ ಪುರ್, ಧರಂಸಿಂಗ್ ಮನೆ, ಧಡವೆ ಆಸ್ಪತ್ರೆ, ಶಹಾಬಜಾರ್ ನಾಕಾ, ಹಳೆ ಶೆಟ್ಟಿ ಕಾಂಪ್ಲೆಕ್ಸ್, ಶಹಾಬಜಾರ್ ಡೆಂಗಿ ಗಲ್ಲಿ, ಗಂಧಿಗುಡಿ ಲೇಔಟ್, ಅಕ್ಕಮಹಾದೇವಿ ದೇವಸ್ಥಾನ, ಕೈಲಾಸ ನಗರದ ಮೂಲಕ ಹಾದು ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಂಡಿತು. ಪಥ ಸಂಚಲನದಲ್ಲಿ ೧೬೩ ಸ್ವಯಂಸೇವಕರು ಪೂರ್ಣ ಗಣವೇಶದಲ್ಲಿ ಭಾಗಿಯಾಗಿದ್ದು, ದಾರಿಯುದ್ದಕ್ಕೂ ಹೂವು ಚೆಲ್ಲುವ ಮೂಲಕ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಕಲಬುರಗಿ ವಿಭಾಗದ ವಿಭಾಗ ಪ್ರಚಾರಕರಾದ ವಿಜಯ್ ಮಹಾಂತೇಶ್,ಜಿಲ್ಲಾ ಸಹ ಕಾರ್ಯವಾಹ ಮಲ್ಲಿನಾಥ ಅವರಾದಿ, ನಗರ ಶಾರೀರಿಕ ಪ್ರಮುಖ ಚಿದಾನಂದ ಹಿರೇಮಠ, ನಗರ ವ್ಯವಸ್ಥಾ ಪ್ರಮುಖ ಶರಣರಾಜ್ ಖೇಳೆಗಾಂವಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!