ಸೆಪ್ಟೆಂಬರ್ 14-16ರ ವರೆಗೆ ರಾ. ಸ್ವ. ಸಂಘದ ಸಮನ್ವಯ ಬೈಠಕ್- ಇಲ್ಲಿವೆ ವಿವರಗಳು‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪುಣೆಯಲ್ಲಿ ಸೆಪ್ಟೆಂಬರ್ 14 ರಿಂದ 16ರ ವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ (ಸಮನ್ವಯ ಸಭೆ) 2023 ನಡೆಯಲಿದ್ದು, ಪ್ರಮುಖ ರಾಷ್ಟ್ರೀಯ ಸಮಸ್ಯೆಗಳು ಮತ್ತು ಸಾಮಾಜಿಕ ಬದಲಾವಣೆಯ ಪ್ರಯತ್ನಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರಕರಾದ ಸುನೀಲ್ ಅಂಬೇಕರ್ ತಿಳಿಸಿದರು.

ಆರ್‌ಎಸ್‌ಎಸ್‌ ಸಮನ್ವಯ ಸಭೆ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಂಬೇಕರ್‌ ಮಾತನಾಡಿದರು. ರಾ. ಸ್ವ. ಸಂಘದ ಸಮನ್ವಯ ಬೈಠಕ್‌ನಲ್ಲಿ 36 ಸಂಸ್ಥೆಗಳ 266 ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಮೂರು ದಿನಗಳ ಈ ಸಭೆಯಲ್ಲಿ ಪರಿಸರ ಸ್ನೇಹಿ ಜೀವನಶೈಲಿ, ಜೀವನ ಮೌಲ್ಯಾಧಾರಿತ ಕುಟುಂಬ ವ್ಯವಸ್ಥೆ, ಸಾಮರಸ್ಯ, ಸ್ವದೇಶಿ ನಡವಳಿಕೆ ಮತ್ತು ನಾಗರಿಕ ಕರ್ತವ್ಯಗಳ ನಿರ್ವಹಣೆಯಂತಹ ಐದು ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಸುನೀಲ್ ಅಂಬೇಕರ್ ಹೇಳಿದರು.

ಆರ್‌ಎಸ್‌ಎಸ್ ಸ್ವಯಂಸೇವಕರು ತಮ್ಮ ಶಾಖಾ ಕಾರ್ಯದ ಮೂಲಕ ರಾಷ್ಟ್ರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಶಾಖೆಗಳ ಕೆಲಸದ ಜೊತೆಗೆ ಅವರು ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಎಲ್ಲಾ ಸಂಸ್ಥೆಗಳು ಸಂಘದಿಂದ ಸ್ಫೂರ್ತಿ ಪಡೆದಿವೆ ಮತ್ತು ಸಾಮಾಜಿಕ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾಯತ್ತವಾಗಿ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳು ವರ್ಷಕ್ಕೊಮ್ಮೆ ಸಭೆ ಸೇರುತ್ತಾರೆ, ಈ ವೇಳೆ ತಮ್ಮ ಕೆಲಸ ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಪರಸ್ಪರ ಕಲಿಕೆಗೆ ಹಾಗೂ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ಒದಗಿಸಿದಂತಾಗುತ್ತದೆ. ಈ ಎಲ್ಲಾ ಸಂಸ್ಥೆಗಳು ಒಂದೇ ರೀತಿಯ ಉದ್ದೇಶಗಳು ಮತ್ತು ಗುರಿಗಳೊಂದಿಗೆ ಕೆಲಸ ಮಾಡುತ್ತವೆ. ಹಾಗಾಗಿ ಅವರೊಂದಿಗಿನ ಸಭೆಯಲ್ಲಿ ಪ್ರಮುಖ ರಾಷ್ಟ್ರೀಯ ಸಮಸ್ಯೆಗಳು ಮತ್ತು ಸಾಮಾಜಿಕ ಬದಲಾವಣೆಯ ಪ್ರಯತ್ನಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದರು.

ಸಭೆಯಲ್ಲಿ ತಮ್ಮ ತಮ್ಮ ಕ್ಷೇತ್ರದ ಅನುಭವಗಳನ್ನು ಪ್ರತಿನಿಧಿಗಳು ಹಂಚಿಕೊಳ್ಳಲಿದ್ದಾರೆ. ಅದಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಮೂಲಭೂತ ಚರ್ಚೆಗಳೂ ನಡೆಯಲಿದ್ದು, ಸಂಸ್ಥೆಯ ಭವಿಷ್ಯದ ದಿಕ್ಕು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಏನೆಲ್ಲಾ ಚಿಂತನೆ ನಡೆಸಿದ್ದಾರೆ ಎಂಬ ಹಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸರಸಂಘದ ಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹ ಡಾ. ಕೃಷ್ಣಗೋಪಾಲ್, ಡಾ. ಮನಮೋಹನ್ ವೈದ್ಯ , ಅರುಣ್ ಕುಮಾರ್, ಮುಕುಂದ ಮತ್ತು ರಾಮದತ್ ಚಕ್ರಧರ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಕ್ಷಂ, ವನವಾಸಿ ಕಲ್ಯಾಣ ಆಶ್ರಮ, ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್, ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಜನತಾ ಪಕ್ಷ, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ ಮತ್ತು ಇತರ ಮಿತ್ರ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!