ಹೊಸ ದಿಗಂತ ವರದಿ, ಮಂಗಳೂರು:
ನಾಗರಿಕತೆ ಉಳಿಯಬೇಕಾದರೆ ಸಾಮಾಜಿಕ ಪರಿವರ್ತನೆ ಹಾಗೂ ವ್ಯವಸ್ಥೆ ಪರಿವರ್ತನೆ ಮಾಡುವ ಕಾರ್ಯ ಆಗಬೇಕಿದೆ. ಇಂದು ಜಗತ್ತಿನಲ್ಲಿ ಅನೇಕ ನಾಗರಿಕತೆಗಳು ನಶಿಸಿ ಹೋಗಲು ಈ ಎರಡು ಅಂಶಗಳ ಕೊರತೆಯೇ ಕಾರಣವಾಗಿತ್ತು . ಆದರೆ ನಮ್ಮ ಸನಾತನ ಹಿಂದು ಧರ್ಮ-ಸಂಸ್ಕೃತಿ ಇಂದಿಗೂ ಉಳಿದಿರುವುದಕ್ಕೆ ಇಂತಹ ಚೈತನ್ಯಶೀಲತೆ ಕಾರಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ.ಆರ್.ಅವರು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಸಂಘಚಾಲಕ್ ಆಗಿದ್ದ ತೋನ್ಸೆ ಶಂಭು ಶೆಟ್ಟಿ ಅವರು 90 ಸಂವತ್ಸರಗಳನ್ನು ಪೂರೈಸುತ್ತಿರುವ ಸದವಸರದಲ್ಲಿ, ಮಂಗಳವಾರ ಇಲ್ಲಿನ ಕಿನ್ನಿಮೂಲ್ಕಿಯ ಶ್ರೀ ದೇವಿ ಸಭಾಭವನದಲ್ಲಿ ವೇ.ಮೂ.ಬ್ರಹ್ಮಶ್ರೀ ಭಟ್ಟರಕೇರಿ ಶ್ರೀ ಮಂಜುನಾಥ ಭಟ್ಟರ ನೇತೃತ್ವದಲ್ಲಿ ನಡೆದ ರಾಷ್ಟ್ರ ವಿಜಯ ಯಜ್ಞ, ಕಲ್ಯಾಣ ರುದ್ರ ಯಜ್ಞಾನುಷ್ಠಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ನಮ್ಮ ಜೀವನ-ನಮ್ಮ ಧರ್ಮ-ನಮ್ಮ ರಾಷ್ಟ್ರ ಕುರಿತಂತೆ ಉಪನ್ಯಾಸ ನೀಡಿದರು.
ವ್ಯವಸ್ಥೆ ಶಿಥಿಲಗೊಂಡು ರೋಮ್, ಗ್ರೀಕ್, ಮಾಯಾದಂತಹ ಅನೇಕ ನಾಗರಿಕತೆಗಳು ಇಂದು ನಾಶವಾಗಿವೆ. ಆದರೆ ನಮ್ಮ ಸನಾತನ ಸಂಸ್ಕೃತಿ ಇಂದೂ ಉಳಿದುಕೊಂಡಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘ ನಮ್ಮ ರಾಷ್ಟ್ರ ವನ್ನು ಪರಮ ವೈಭವಕ್ಕೆ ಒಯ್ಯುವ ಸಂಕಲ್ಪತೊಟ್ಟಿದೆ. ನಾವೆಲ್ಲರೂ ಆ ಕಾರ್ಯ ಶಕ್ತಿಯ ಭಾಗವಾಗಿದ್ದೇವೆ. ಇದನ್ನೇ ನಾವು ಶಾಖೆಯಲ್ಲಿ ಪ್ರತಿನಿತ್ಯ ಕಲಿಯುತ್ತೇವೆ ಎಂದರು. ಸಂಘದ ಶಾಖೆಯಲ್ಲಿ ದೇಶಭಕ್ತಿ, ಅನುಶಾಸನ, ಪ್ರಾಮಾಣಿಕತೆಯಂತಹ ಗುಣಗಳನ್ನು ಕಲಿಯುತ್ತೇವೆ. ಇಷ್ಟು ಮಾತ್ರವಲ್ಲದೇ ಸಂಘವು ರಾಷ್ಟ್ರ ಧರ್ಮ, ಶಿಕ್ಷಣ, ಸಂಸ್ಕೃತಿ, ಕಲೆ , ಸಾಹಿತ್ಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಸನಾತನ ಸಂಸ್ಕೃತಿಯ ಕೆಲಸಗಳನ್ನು ಮಾಡುತ್ತಾ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕಾರ್ಯವನ್ನು ಸಂಘ ಮಾಡುತ್ತಿದೆ ಎಂದು ತಿಳಿಸಿದರು. ಸಂಘದ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ್ ಹೆಡ್ಗೇವಾರ್ ಅವರು ಸಂಘವು ಸಮಾಜದಲ್ಲಿ ಒಂದು ಸಂಘಟನೆಯಾಗಿರಬಾರದು. ಸಮಾಜವೇ ಸಂಘಟನೆಯಾಗುವಂತೆ ಸಂಘವಿರಬೇಕು ಎಂದಿದ್ದರು. ಆ ನಿಟ್ಟಿನಲ್ಲಿ ಸಂಘವು ಸಾಮಾನ್ಯ ಜನರಲ್ಲೂ ರಾಷ್ಟ್ರಧರ್ಮ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರೀಯ ಸಂಘಚಾಲಕ್ ಡಾ.ಪಿ. ವಾಮನ ಶೆಣೈ, ಮಂಗಳೂರು ವಿಭಾಗ ಸಂಘಚಾಲಕ್ ನಾರಾಯಣ ಶೆಣೈ, ಅಖಿಲ ಭಾರತೀಯ ಸೇವಾ ಪ್ರಮುಖ್ ಮಂಗೇಶ್ ಭೇಂಡೆ,ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಜೇಷ್ಠ ಪ್ರಚಾರಕ್ ಸು. ರಾಮಣ್ಣ, ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್, ದಾ.ಮ. ರವೀಂದ್ರ, ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ , ವಿಶ್ವಹಿಂದು ಪರಿಷತ್ತಿನ ಹಿರಿಯರಾದ ಡಾ.ಎಂ.ಬಿ.ಪುರಾಣಿಕ್, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ,ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಎಸ್‌ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಕುಯಿಲಾಡಿ ಸುರೇಶ್ ನಾಯಕ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಿತಿ ಸಂಚಾಲಕರಾದ ಖ್ಯಾತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು ಸ್ವಾಗತಿಸಿದರು. ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪರಿಚಯಿಸಿದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಸ್ತಾವನೆಗೈದರು. ಕಿಶೋರ್ ಕುಮಾರ್ ವಂದಿಸಿದರು.

