January21, 2026
Wednesday, January 21, 2026
spot_img

ನಮ್ಮ ಮೆಟ್ರೋದಲ್ಲಿ ರೂಲ್ಸ್ ಬ್ರೇಕ್‌: ಇನ್ಮುಂದೆ ಜೋರಾಗಿ ಮಾತಾಡೋದು, ತಿನ್ನೋದು ಕಂಡ್ರೆ ಬೀಳುತ್ತೆ ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ನಗರದಲ್ಲಿ ಸಂಚಾರದ ಒತ್ತಡದ ನಡುವೆ ತ್ವರಿತ ಪ್ರಯಾಣಕ್ಕೆ ನಮ್ಮ ಮೆಟ್ರೋ ಪ್ರಮುಖ ಆಯ್ಕೆಯಾಗಿ ಬೆಳೆದಿದೆ. ದಿನೇದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ನಿಯಮ ಉಲ್ಲಂಘನೆಯ ದೂರುಗಳೂ ಹೆಚ್ಚಾಗುತ್ತಿವೆ. ವಿಶೇಷವಾಗಿ ಮೆಟ್ರೋ ಕೋಚ್‌ಗಳಲ್ಲಿ ಮೊಬೈಲ್ ಬಳಕೆಯಿಂದ ಉಂಟಾಗುವ ಅಶಾಂತಿ ಸಹಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಬಿಎಂಆರ್‌ಸಿಎಲ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಮೆಟ್ರೋ ಪ್ರಯಾಣದ ವೇಳೆ ಜೋರಾದ ವಾಲ್ಯೂಮ್‌ನಲ್ಲಿ ರೀಲ್ಸ್‌ ವೀಕ್ಷಣೆ, ಯೂಟ್ಯೂಬ್ ವಿಡಿಯೋ ಪ್ಲೇ ಮಾಡುವುದು, ಬ್ಲೂಟೂತ್ ಬಳಸಿ ಗಟ್ಟಿಯಾಗಿ ಮಾತನಾಡುವುದು ಸಾಮಾನ್ಯವಾಗುತ್ತಿದೆ. ಇದರಿಂದ ಪ್ರಯಾಣದ ಶಾಂತಿ ಕದಡುವುದಾಗಿ ಹಲವು ಪ್ರಯಾಣಿಕರು ದೂರು ನೀಡಿದ್ದಾರೆ. ನಿಯಮಗಳಿದ್ದರೂ ಅವುಗಳ ಪಾಲನೆ ಆಗದ ಹಿನ್ನೆಲೆ, ಒಂದೇ ತಿಂಗಳಲ್ಲಿ ಸಾವಿರಾರು ದೂರುಗಳು ದಾಖಲಾಗಿವೆ.

ಇದನ್ನೂ ಓದಿ:

ಡಿಸೆಂಬರ್ 5ರಿಂದ 25ರವರೆಗೆ ಲೌಡ್ ಸೌಂಡ್ ಬಳಕೆಗೆ ಸಂಬಂಧಿಸಿದಂತೆ 6,520 ಪ್ರಕರಣಗಳು ದಾಖಲಾಗಿವೆ. ಮೆಟ್ರೋದಲ್ಲಿ ತಿಂಡಿ ಸೇವನೆ ಸಂಬಂಧ 268 ಪ್ರಕರಣಗಳು, ತಂಬಾಕು ಸೇವನೆಗೆ ಸಂಬಂಧಿಸಿದಂತೆ 641 ದೂರುಗಳು ದಾಖಲಾಗಿವೆ. ಕಳೆದ ಒಂದು ವರ್ಷದಿಂದ ತಪಾಸಣೆ ನಡೆಸಲಾಗುತ್ತಿದ್ದರೂ, ಎಚ್ಚರಿಕೆಗಳು ಫಲ ನೀಡದ ಕಾರಣ ದಂಡ ವಿಧಿಸುವ ನಿರ್ಧಾರಕ್ಕೆ ಬರಲಾಗಿದೆ.

ಶೀಘ್ರದಲ್ಲೇ ಫೈನ್ ವ್ಯವಸ್ಥೆ ಜಾರಿಗೆ ಬರಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಪ್ರಯಾಣಿಕರು ಸಹಕರಿಸುವಂತೆ ಮೆಟ್ರೋ ಆಡಳಿತ ಮನವಿ ಮಾಡಿದೆ.

Must Read