ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಏಪ್ರಿಲ್ 8ರಂದು ನಡೆಯುವ ಸಂಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆ ಕೆನಡಾದ ಒಂಟಾರಿಯೊ ಪ್ರಾಂತದ ನಯಾಗರಾಕ್ಕೆ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿದ್ಧತಾ ಕ್ರಮಗಳಿಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ವಾಹನ ದಟ್ಟಣೆ, ತುರ್ತು ಸೇವೆಗಳಿಗೆ ಹೆಚ್ಚಿನ ಬೇಡಿಕೆ, ಮೊಬೈಲ್ ಫೋನ್ ನೆಟ್‌ವರ್ಕ್ ಮೇಲಿನ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೇಯರ್ ಜಿಮ್ ಡಿಯೊಡಾಟಿ ಹೇಳಿದ್ದಾರೆ.
1979ರ ಬಳಿಕ ಇದೇ ಮೊದಲಬಾರಿಗೆ ಸೂರ್ಯಗ್ರಹಣವು ಈ ಪ್ರದೇಶವನ್ನು ಸ್ಪರ್ಶಿಸಲಿದೆ. ಜೊತೆಗೆ ನಯಾಗರಾ ಜಲಪಾತವು ಇದನ್ನು ವೀಕ್ಷಿಸಲು ಇರುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ ಎಂದು ‘ನ್ಯಾಷನಲ್ ಜಿಯೊಗ್ರಫಿಕ್’ ಕೂಡಾ ಹೇಳಿದೆ. ಈ ಹಿನ್ನೆಲೆಯಲ್ಲಿ ಏ.8ರಂದು ನಯಾಗರಾ ನಗರವು ದಾಖಲೆ ಸಂಖ್ಯೆಯ ಪ್ರವಾಸಿಗರನ್ನು ಎದುರು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.