ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ-ಉಕ್ರೇನ್ ನಡುವಿನ ಸಮರ ಮುಂದುವರಿದಿದ್ದು, ಉಕ್ರೇನ್ ಮೇಲೆ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (ICBM) ರಷ್ಯಾ ಉಡಾಯಿಸಿದೆ. 60 ವರ್ಷಗಳಲ್ಲೇ ಯುದ್ಧದಲ್ಲಿ ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಬಳಕೆ ಮಾಡಲಾಗಿದೆ.
ಈ ವಾರ ಉಕ್ರೇನ್ ಯುಎಸ್ ಮತ್ತು ಯುಕೆ ನಿರ್ಮಿತ ಕ್ಷಿಪಣಿಗಳನ್ನು ರಷ್ಯಾದ ಭೂಪ್ರದೇಶದೊಳಗೆ ಮಿಲಿಟರಿ ಗುರಿಗಳನ್ನು ಹೊಡೆಯಲು ಬಳಸಿತ್ತು. ಅದಕ್ಕೆ ಪ್ರತಿಕಾರವಾಗಿ ರಷ್ಯಾ ಈ ವೈಮಾನಿಕ ದಾಳಿಯನ್ನು ನಡೆಸಿದೆ.
ಯುದ್ಧದಲ್ಲಿ ಹಿಂದೆಂದೂ ಬಳಸದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಮಧ್ಯ ಉಕ್ರೇನಿಯನ್ ನಗರವಾದ ಡ್ನಿಪ್ರೋದಲ್ಲಿನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ICBMಗಳು 5,500 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯನ್ನು ಹೊಂದಿವೆ. ಪರಮಾಣು, ರಾಸಾಯನಿಕ ಮತ್ತು ಜೈವಿಕ ಸಿಡಿತಲೆಗಳನ್ನು ಸಾಗಿಸಲು ನಿರ್ಮಿಸಲಾಗಿದೆ. ಇದು ಸಾಂಪ್ರದಾಯಿಕ ಸಿಡಿತಲೆಯನ್ನು ಸಹ ಸಾಗಿಸಬಲ್ಲದು. ಇದನ್ನು ರಷ್ಯಾ RS-26 ರುಬೆಜ್, ಬ್ಯಾಲಿಸ್ಟಿಕ್ ಕ್ಷಿಪಣಿಯಲ್ಲಿ ಬಳಸಿದೆ ಎಂದು ವರದಿಯಾಗಿದೆ. ಉಕ್ರೇನ್‌ನಲ್ಲಿ ಹಾನಿಗೊಳಗಾದ ಸ್ಥಳದಿಂದ 1,000 ಕಿಮೀ ದೂರದಲ್ಲಿರುವ ರಷ್ಯಾದ ಅಸ್ಟ್ರಾಖಾನ್ ಪ್ರದೇಶದಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.
ವೈಮಾನಿಕ ದಾಳಿಯ ಕಳವಳದಿಂದಾಗಿ, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಈಗಾಗಲೇ ಕೈವ್‌ನಲ್ಲಿ ಗುರುವಾರ ತಮ್ಮ ರಾಯಭಾರ ಕಚೇರಿಗಳನ್ನು ಮುಚ್ಚಿವೆ ಎಂದು ಸ್ಟೇಟ್ ಕಾನ್ಸುಲರ್ ವ್ಯವಹಾರಗಳ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.