ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಷ್ಯಾ ಸರ್ಕಾರ ಡ್ರೋನ್ ವೀಡಿಯೋವನ್ನು ಬಿಡುಗಡೆ ಮಾಡಿದೆ. ಈ ವೀಡಿಯೋವನ್ನು ದಾಳಿ ನಡೆಸಲು ಬಳಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.
ನವ್ಗೊರೊಡ್ ಪ್ರದೇಶದಲ್ಲಿರುವ ಪುಟಿನ್ ಅವರ ನಿವಾಸದ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ರಷ್ಯಾ ಈಗಾಗಲೇ ಆರೋಪಿಸಿತ್ತು. ಆದರೆ, ದಾಳಿ ನಡೆದ ವೇಳೆ ಪುಟಿನ್ ಎಲ್ಲಿದ್ದರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ರಷ್ಯಾದ ರಕ್ಷಣಾ ಸಚಿವಾಲಯ, ಹೊಡೆದುರುಳಿಸಿದ ಡ್ರೋನ್‌ನ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಅದೇ ದಾಳಿಗೆ ಬಳಸಿದ ಡ್ರೋನ್ ಎಂದು ಹೇಳಿದೆ.
ರಾತ್ರಿ ವೇಳೆ ಚಿತ್ರೀಕರಿಸಲಾದ ಈ ವೀಡಿಯೋದಲ್ಲಿ, ಅರಣ್ಯ ಪ್ರದೇಶದ ಹಿಮದ ಮೇಲೆ ಬಿದ್ದಿರುವ ಹಾನಿಗೊಳಗಾದ ಡ್ರೋನ್ ಕಾಣಿಸುತ್ತದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಫ್ಲೋರಿಡಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುತ್ತಿದ್ದ ಸಮಯದಲ್ಲೇ ಈ ದಾಳಿ ನಡೆದಿದೆ ಎಂಬುದು ಗಮನಾರ್ಹವಾಗಿದೆ.
ಇನ್ನೊಂದೆಡೆ, ರಷ್ಯಾದ ಆರೋಪಗಳನ್ನು ಉಕ್ರೇನ್ ತೀವ್ರವಾಗಿ ತಳ್ಳಿಹಾಕಿದೆ. ಶಾಂತಿ ಮಾತುಕತೆಗಳನ್ನು ಹಾಳು ಮಾಡುವ ಉದ್ದೇಶದಿಂದ ರಷ್ಯಾ ಇಂತಹ ಕಟ್ಟುಕಥೆಗಳನ್ನು ಹೆಣೆಯುತ್ತಿದೆ ಎಂದು ಉಕ್ರೇನ್ ಪ್ರತಿಕ್ರಿಯಿಸಿದೆ.

