ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಜಿನ್ ವೈಫಲ್ಯದ ಕಾರಣದಿಂದಾಗಿ ಹಾರಾಟ ನಡೆಸುತ್ತಿದ್ದ ರಷ್ಯಾದ ಯುದ್ಧ ವಿಮಾನವೊಂದು ಅಜೋವ್ ನಗರದ ಬಂದರಿನ ಬಳಿಯ ವಸತಿ ಪ್ರದೇಶಕ್ಕೆ ಅಪ್ಪಳಿಸಿದ್ದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವಸತಿ ಪ್ರದೇಶದಲ್ಲಿರುವ ಒಂಭತ್ತು ಅಂತಸ್ತಿನ ಕಟ್ಟಡವೊಂದಕ್ಕೆ ವಿಮಾನವು ಅಪ್ಪಳಿಸಿದ ಪರಿಣಾಮ ಬೃಹತ್ ಬೆಂಕಿಯು ಕಟ್ಟವನ್ನಾವರಿಸಿಕೊಂಡಿತು ಎನ್ನಲಾಗಿದೆ.
ತರಬೇತಿ ಕಾರ್ಯಾಚರಣೆಗಾಗಿ ಟೇಕ್‌ಆಫ್ ಮಾಡುವಾಗ ಅದರ ಎಂಜಿನ್‌ಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡ ನಂತರ ಎಸ್‌ಯು -34 ಬಾಂಬರ್ ವಿಮಾನವು ಬಂದರು ನಗರವಾದ ಯೆಸ್ಕ್‌ನಲ್ಲಿ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಇಬ್ಬರೂ ಸಿಬ್ಬಂದಿಗಳು ಸುರಕ್ಷಿತವಾಗಿ ಹೊರಬಂದರು ಎಂದು ಅದು ಹೇಳಿದೆ, ಆದರೆ ವಿಮಾನವು ವಸತಿ ಪ್ರದೇಶಕ್ಕೆ ಅಪ್ಪಳಿಸಿದ ಪರಿಣಾಮ ಟನ್‌ಗಟ್ಟಲೆ ಇಂಧನ ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿತು ಎಂದು ಮೂಲಗಳ ವರದಿ ತಿಳಿಸಿದೆ.
ಕನಿಷ್ಠ ಇಬ್ಬರು ನಿವಾಸಿಗಳು ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಸುತ್ತಮುತ್ತಲಿನ ಕನಿಷ್ಠ 17 ಅಪಾರ್ಟ್‌ಮೆಂಟ್‌ಗಳು ಬೆಂಕಿಯಿಂದ ಪ್ರಭಾವಿತವಾಗಿದ್ದು, ಸುಮಾರು 100 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.