ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ನ ಪ್ರಮುಖ ವಿದ್ಯುತ್ ಸಂಪರ್ಕ ಜಾಲದ ಮೇಲೆ ರಷ್ಯಾ ಸೇನೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
ರಾಜಧಾನಿ ಕೀವ್ ಮೇಲೆ ತೂರಿ ಬಂದ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಲು ಉಕ್ರೇನ್‌ನ ವಾಯು ರಕ್ಷಣಾ ಪಡೆಗಳು ಐದು ತಾಸು ಹೋರಾಟ ನಡೆಸಿದವು ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಕೀವ್ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಗರದಲ್ಲಿ ಶಿಶುವಿಹಾರ, ಗ್ಯಾಸ್ ಪೈಪ್ ಮತ್ತು ಸುಮಾರು 20 ಕಾರುಗಳಿಗೆ ಹಾನಿಯಾಗಿದೆ ಎಂದು ಕೀವ್ ಸೇನಾ ಆಡಳಿತ ತಿಳಿಸಿದೆ.
ಉಕ್ರೇನ್‌ನ ಪಶ್ಚಿಮ ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶದಲ್ಲಿ ಇಂಧನ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ದಕ್ಷಿಣದ ಮೈಕೋಲೈವ್ ಪ್ರದೇಶದಲ್ಲಿಯೂ ವಿದ್ಯುತ್ ಸಂಪರ್ಕ ಜಾಲದ ಮೇಲೆ ದಾಳಿಯಾಗಿದೆ.
ರಷ್ಯಾ ಪಡೆಗಳು, ಬುಧವಾರ ರಾತ್ರಿಯಿಂದ ಗುರುವಾರ ನಸುಕಿನವರೆಗೂ ಉಕ್ರೇನ್ ಮೇಲೆ ಆರು ಕ್ಷಿಪಣಿಗಳು ಮತ್ತು 78 ಡ್ರೋನ್‌ಗಳನ್ನು ಉಡಾಯಿಸಿವೆ. ಇದರಲ್ಲಿ ನಾಲ್ಕು ಕ್ಷಿಪಣಿಗಳನ್ನು ಮತ್ತು 66 ಡ್ರೋನ್‌ಗಳನ್ನು ವಾಯು ಮಾರ್ಗದಲ್ಲೇ ನಾಶಪಡಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.