ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಪೂರ್ವ ಭಾಗದಲ್ಲಿ ಸುಮಾರು 50 ಜನ ಪ್ರಯಾಣಿಕರನ್ನು ಹೊತ್ತಿದ್ದ ವಿಮಾನವೊಂದು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಚೀನಾದ ಗಡಿಗೆ ಸಮೀಪವಿರುವ ಅಮುರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಮಾನವು ಟಿಂಡಾ ನಗರದತ್ತ ತೆರಳುತ್ತಿತ್ತು ಎಂದು ರಷ್ಯಾದ ಮಾಧ್ಯಮಗಳು ತಿಳಿಸಿವೆ.
ಅಂಗಾರ ಏರ್‌ಲೈನ್ಸ್‌ಗೆ ಸೇರಿದ ಆನ್-24 ಮಾದರಿಯ ವಿಮಾನವು ನಿರ್ದಿಷ್ಟ ಸಮಯಕ್ಕೆ ಟಿಂಡಾ ವಿಮಾನ ನಿಲ್ದಾಣಕ್ಕೆ ಇಳಿಯಬೇಕಿತ್ತು. ಆದರೆ ವಿಮಾನ ಇಳಿಯುವ ಕೆಲವೇ ಕಿಲೋಮೀಟರ್‌ಗಳು ಬಾಕಿ ಇರುವಾಗ ಅದು ವಾಯು ಸಂಚಾರ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಳೆದುಕೊಂಡಿದೆ. ಶಾಟ್ ಹಾಗೂ ಇಂಟರ್‌ಫ್ಯಾಕ್ಸ್ ಮಾಧ್ಯಮಗಳ ಪ್ರಕಾರ, ಇದೀಗ ಈ ವಿಮಾನವು ನಾಪತ್ತೆಯಾಗಿರುವುದಾಗಿ ಶೋಧ ತಂಡಗಳು ದೃಢಪಡಿಸಿವೆ.
ಅಧಿಕೃತ ಮೂಲಗಳ ಪ್ರಕಾರ, ವಿಮಾನವು ಸಂಪರ್ಕ ಕಳೆದುಕೊಂಡ ಸಮಯದಲ್ಲಿ ಚೀನಾದ ಗಡಿಗೆ ಬಹಳ ಹತ್ತಿರವಿತ್ತು. ಈ ಪ್ರದೇಶವು ಪರ್ವತ ಹಾಗೂ ಕಾಡುಗಳಿಂದ ಕೂಡಿದ್ದು, ನಾಪತ್ತೆಯಾದ ವಿಮಾನವು ಯಾವುದೇ ತಾಂತ್ರಿಕ ದೋಷ ಅಥವಾ ಹವಾಮಾನ ಪೀಡಿತ ಸಮಸ್ಯೆಗೆ ಒಳಗಾಗಿತ್ತೇ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಬಂದಿಲ್ಲ.
ಘಟನೆಯ ತಕ್ಷಣವೇ ರಷ್ಯಾದ ವಿಮಾನಯಾನ ಇಲಾಖೆ ತುರ್ತು ಶೋಧ ಮತ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಿವೆ. ಜೀವ ಹಾನಿ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಇತ್ತೀಚೆಗೆ ವಿಮಾನ ಅಪಘಾತಗಳ ಸಂಖ್ಯೆ ಯುರೋಪ್ ಹಾಗೂ ಏಷ್ಯಾದ ಭಾಗಗಳಲ್ಲಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಭಯ ಭೀತಿಗೆ ಕಾರಣವಾಗಿದೆ.