Thursday, December 4, 2025

ಇಂದು ಸಂಜೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ: ರಾತ್ರಿ ಪ್ರಧಾನಿ ಮೋದಿಯಿಂದ ಖಾಸಗಿ ಔತಣಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದೊಂದಿಗಿನ ಸಂಬಂಧದಲ್ಲಿ ಇತ್ತೀಚೆಗೆ ಕೆಲವು ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ, ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ವಿಶಾಲ ಗುರಿಯೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟನ್ ಇಂದು ಗುರುವಾರ ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಾಸಗಿ ಭೋಜನ ಕೂಟವನ್ನು ಆಯೋಜಿಸಲಿದ್ದಾರೆ.

ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವುದು, ದ್ವಿಪಕ್ಷೀಯ ವ್ಯಾಪಾರವನ್ನು ಬಾಹ್ಯ ಒತ್ತಡದಿಂದ ರಕ್ಷಿಸುವುದು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳಲ್ಲಿ ಸಹಕಾರವನ್ನು ಅನ್ವೇಷಿಸುವುದು ನಾಳೆ ಮೋದಿ ಮತ್ತು ಪುಟಿನ್ ನಡುವಿನ ಶೃಂಗಸಭೆಯ ಮಾತುಕತೆಯ ಕೇಂದ್ರಬಿಂದುವಾಗಿದೆ.

ಇದನ್ನು ಪಾಶ್ಚಾತ್ಯ ದೇಶಗಳು ಸೂಕ್ಷ್ಮವಾಗಿ ಗಮನಿಸಲಿವೆ. ಇಂದು ಸಂಜೆ 4:30 ರ ಸುಮಾರಿಗೆ ರಷ್ಯಾದ ಅಧ್ಯಕ್ಷರು ದೆಹಲಿಗೆ ಆಗಮಿಸುವ ಸಾಧ್ಯತೆಯಿದೆ. ನಂತರ, ಕಳೆದ ವರ್ಷ ಜುಲೈನಲ್ಲಿ ಮಾಸ್ಕೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ನೀಡಿದ್ದ ಭೋಜನ ಕೂಟಕ್ಕೆ ಪ್ರತಿಯಾಗಿ ಖಾಸಗಿ ಭೋಜನ ಕೂಟವನ್ನು ಆಯೋಜಿಸಲಿದ್ದಾರೆ.

ನಾಳೆ, 23 ನೇ ಭಾರತ-ರಷ್ಯಾ ಶೃಂಗಸಭೆಗೆ ಮುಂಚಿತವಾಗಿ ಪುಟಿನ್ ಅವರಿಗೆ ವಿದ್ಯುಕ್ತ ಸ್ವಾಗತ ನೀಡಲಾಗುವುದು. ಶೃಂಗಸಭೆಯ ಸ್ಥಳವಾದ ಹೈದರಾಬಾದ್ ಹೌಸ್‌ನಲ್ಲಿ ಮೋದಿ ರಷ್ಯಾದ ನಿಯೋಗಕ್ಕೆ ಭೋಜನವನ್ನು ಸಹ ಆಯೋಜಿಸಲಿದ್ದಾರೆ. ನಾಳೆ ಬೆಳಗ್ಗೆ ಪುಟಿನ್ ದೆಹಲಿಯ ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದಾರೆ.

ಶೃಂಗಸಭೆಯ ನಂತರ, ಪುಟಿನ್ ರಷ್ಯಾದ ಸರ್ಕಾರಿ ಸ್ವಾಮ್ಯದ ಪ್ರಸಾರಕ ಆರ್‌ಟಿಯ ಹೊಸ ಭಾರತ ಚಾನೆಲ್ ನ್ನು ಉದ್ಘಾಟಿಸಲಿದ್ದಾರೆ, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವಾರ್ಥವಾಗಿ ಆಯೋಜಿಸಲಾಗುವ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.

ನಾಳೆ ರಾತ್ರಿ 9:30 ರ ಸುಮಾರಿಗೆ ಪುಟಿನ್ ಅವರು ಭಾರತದಿಂದ ಹೊರಡುವ ನಿರೀಕ್ಷೆಯಿದ್ದು, ಅವರ ಸುಮಾರು 28 ಗಂಟೆಗಳ ಭೇಟಿಯನ್ನು ಮುಕ್ತಾಯಗೊಳಿಸಲಿದ್ದಾರೆ. ಶೃಂಗಸಭೆಯ ಮಾತುಕತೆಗಳಲ್ಲಿ, ಭಾರತವು ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದರಿಂದ ಉಂಟಾದ ಹೆಚ್ಚುತ್ತಿರುವ ವ್ಯಾಪಾರ ಕೊರತೆಯನ್ನು ಪರಿಹರಿಸಲು ಭಾರತ ಒತ್ತಾಯಿಸುವ ನಿರೀಕ್ಷೆಯಿದೆ. ಅಮೆರಿಕ ಶೇಕಡಾ 50 ರಷ್ಟು ಭಾರಿ ನಿರ್ಬಂಧ ಹೇರಿದ ನಂತರ ಭಾರತ-ಯುಎಸ್ ಸಂಬಂಧ ಸಹ ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷರ ಭೇಟಿ ಮಹತ್ವ ಪಡೆದಿದೆ.

error: Content is protected !!