ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದುತ್ತಿರುವ ಯುದ್ಧ ಮತ್ತಷ್ಟು ಗಂಭೀರವಾಗಿ ಮುಂದುವರೆದಿದ್ದು, ಇತ್ತೀಚೆಗೆ ರಷ್ಯಾ ತನ್ನ ಇತಿಹಾಸದಲ್ಲಿಯೇ ಅತಿದೊಡ್ಡ ವಾಯುದಾಳಿಯನ್ನು ಉಕ್ರೇನ್ ಮೇಲೆ ನಡೆಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹೇಳಿಕೆಗೆ ಅನುಸಾರ, ಈ ದಾಳಿಯಲ್ಲಿ ರಷ್ಯಾ ಒಟ್ಟು 537 ಶಸ್ತ್ರಾಸ್ತ್ರಗಳನ್ನು ಬಳಸಿದೆ.
ಈ ದಾಳಿಯಲ್ಲಿ 477 ಡ್ರೋನ್‌ಗಳು ಮತ್ತು 60 ಕ್ಷಿಪಣಿಗಳು ಇದ್ದು, ಉಕ್ರೇನ್ ನಾನಾ ಭಾಗಗಳನ್ನು ಟಾರ್ಗೆಟ್ ಮಾಡಲಾಗಿದೆ. ಈ ದಾಳಿಯ ಹೃದಯವಿದ್ರಾವಕ ಘಟನೆಯೆಂದರೆ, ಎಫ್-16 ಯುದ್ಧ ವಿಮಾನ ಚಲಾಯಿಸುತ್ತಿದ್ದ ಉಕ್ರೇನಿಯನ್ ಪೈಲಟ್ ಮ್ಯಾಕ್ಸಿಮ್ ಉಸ್ಟೆಂಕೊ ಅವರು ರಷ್ಯಾ ದಾಳಿಗೆ ಬಲಿಯಾಗಿದ್ದಾರೆ.
ಉಕ್ರೇನಿಯನ್ ವಾಯುಪಡೆಯ ಪ್ರಕಾರ, ದಾಳಿ ನಡೆಸಲಾದ ಡ್ರೋನ್‌ಗಳಲ್ಲಿ 249 ಅನ್ನು ತಡೆದು ಹೊಡೆದುರುಳಿಸಲಾಗಿದೆ. ಉಳಿದ 226 ಡ್ರೋನ್‌ಗಳು ಎಲೆಕ್ಟ್ರಾನಿಕ್ ಜಾಮಿಂಗ್‌ನಿಂದ ಹಾರಾಟವನ್ನು ನಿಲ್ಲಿಸಿವೆ ಎಂದು ತಿಳಿದುಬಂದಿದೆ. ಇದರ ಜತೆಗೆ ರಷ್ಯಾ ದಾಳಿಗಳು ರಾಷ್ಟ್ರದ ಪಶ್ಚಿಮ ಭಾಗಗಳವರೆಗೆ ವ್ಯಾಪಿಸಿದ್ದು, ತೀವ್ರ ಭೀತಿಯ ಪರಿಸ್ಥಿತಿಯನ್ನು ಉಂಟುಮಾಡಿವೆ.
ಉಕ್ರೇನ್ ವಾಯುಪಡೆಯ ಸಂವಹನ ಮುಖ್ಯಸ್ಥ ಯೂರಿ ಇಹ್ನಾತ್ ಈ ದಾಳಿಯನ್ನು “ಇದುವರೆಗೆ ದೇಶದ ಮೇಲೆ ನಡೆದ ಅತ್ಯಂತ ಭೀಕರ ವೈಮಾನಿಕ ದಾಳಿ” ಎಂದು ಕರೆದಿದ್ದಾರೆ.