ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಚಂದ್ರಯಾನ-3 ಗಿಂತ (Chandrayaan-3) ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್ ಆಗಬೇಕಿದ್ದ ಕನಸು ಇದೀಗ ಭಗ್ನಕೊಂಡಿದೆ. ಲೂನಾ-25 ಲ್ಯಾಂಡರ್ ಚಂದ್ರನಿಗೆ ಅಪ್ಪಳಿಸಿ ಪತನಗೊಂಡಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ಭಾನುವಾರ ತಿಳಿಸಿದೆ.
ಲೂನಾ-25 ಅನ್ನು ಲ್ಯಾಂಡಿಂಗ್ ಪೂರ್ವ ಕಕ್ಷೆಗೆ ಸೇರಿಸುವಲ್ಲಿ ಸಮಸ್ಯೆ ಕಂಡುಬಂದಿದೆ ಎಂದು ಶನಿವಾರದಂದು ರೋಸ್ಕೋಸ್ಮೊಸ್ ವರದಿ ಮಾಡಿತ್ತು. ಅದಲ್ಲದೆಯೇ ಸಮಸ್ಯೆಯನ್ನು ಪರಿಶೀಲಿಸುವುದಾಗಿ ಹೇಳಿತ್ತು, ಆದರೆ ಇಂದು ಲೂನಾ 25 ಚಂದ್ರನಿಗೆ ಅಪ್ಪಳಿಸಿ ಪತನಗೊಂಡಿದೆ ಎಂದು ರೋಸ್ಕೋಸ್ಮೋಸ್ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ ಯಾವ ತಾಂತ್ರಿಕ ಸಮಸ್ಯೆಗಳಿಂದ ಹೀಗಾಗಿದೆ ಎಂಬುದರ ಕುರಿತು ಯಾವುದೇ ಸೂಚನೆಯನ್ನು ನೀಡದೆ, ಪತನದ ಕಾರಣಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಂದ್ರನ ತನ್ನ ನಿಗದಿತ ಪೂರ್ವ-ಲ್ಯಾಂಡಿಂಗ್ ಕಕ್ಷೆಯನ್ನ ಪ್ರವೇಶಿಸುವಲ್ಲಿ ವಿಫಲವಾಗಿದೆ.
ಕುತೂಹಲದ ಸಂಗತಿಯೆಂದರೆ ಜುಲೈ 14ರಂದು ಉಡಾವಣೆಗೊಂಡು ಆಗಸ್ಟ್ 6ರಂದು ಚಂದ್ರನ ಕಕ್ಷೆ ತಲುಪಿದ ಭಾರತದ ಚಂದ್ರಯಾನ-3 ನೌಕೆಯಂತೆ ಲೂನಾ-25 ಅದೇ ಸಮಯದಲ್ಲಿ ಮತ್ತು ಅದೇ ಸಾಮಾನ್ಯ ಪ್ರದೇಶದಲ್ಲಿಯೇ ಇಳಿಯಲಿದೆ ಎಂದು ರಷ್ಯಾ ಹೇಳಿತ್ತು. ಅಲ್ಲದೆ ಭಾರತೀಯ ಬಾಹ್ಯಾಕಾಶ ನೌಕೆಗೂ ಮುಂಚಿತವಾಗಿಯೇ ರಷ್ಯಾದ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಮಯ ನಿಗದಿಪಡಿಸಲಾಗಿತ್ತು.
ಆದರೆ ರಷ್ಯಾದ ಕನಸು ಇದೀಗ ಭಗ್ನಗೊಂಡಿದ್ದು, ಇದೀಗ ಎಲ್ಲರ ಚಿತ್ತ ಭಾರತದತ್ತ ನೋಡುತ್ತಿದೆ. ಚಂದ್ರಯಾನ- 3 ಮಿಷನ್ ಯಶಸ್ವಿಗಾಗಿ ಭಾರತೀಯರು ಕಾತುರರಾಗಿ ನಿಂತಿದ್ದಾರೆ.