ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಶಬರಿಮಲೆ ಮಕರವಿಳಿಕ್ಕು ಸಂಭ್ರಮದಲ್ಲಿದ್ದು, ಹೊಸ ವರ್ಷದ ದಿನ ಮತ್ತೆ ಭಕ್ತಸಾಗರವೇ ಕಾಣಿಸಿಕೊಂಡಿದೆ.
ಮಂಡಲ ಪೂಜೆ ಮುಕ್ತಾಯವಾದ ಬಳಿಕ ಡಿ.27ರಂದು ಮುಚ್ಚಲಾಗಿದ್ದ ದೇವಸ್ಥಾನದ ಬಾಗಿಲನ್ನು ಮಕರವಿಳಕ್ಕು ಉತ್ಸವದ ಅಂಗವಾಗಿ ಮುಖ್ಯ ಅರ್ಚಕ ಪಿ.ಎನ್. ಮಹೇಶ್ ನಂಬೂದಿರಿ, ತಂತ್ರಿ ಕಂಡರಾರು ಮಹೇಶ್ ಮೋಹನರಾರು ಅವರ ಉಪಸ್ಥಿತಿಯಲ್ಲಿ ಶನಿವಾರ ತೆರೆಯಲಾಗಿತ್ತು.
ಹೊಸ ವರ್ಷದ ದಿನವಾದ ಸೋಮವಾರ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಅಗಮಿಸಿದ್ದು, ಅಯ್ಯಪ್ಪ ಸ್ವಾಮಿಗೆ 18,018 ತೆಂಗಿನಕಾಯಿಗಳಿಂದ ತುಪ್ಪದ ಅಭಿಷೇಕ, ಸೇರಿದಂತೆ ಪೂಜೆ ನೆರವೇರಿಸಲಾಗಿತ್ತು.
ಮಕರವಿಳಕ್ಕು ಅಂಗವಾಗಿ ಪ್ರಸಾದ ಶುದ್ಧ ಕ್ರಿಯೆ ಮತ್ತು ಬಿಂಬ ಶುದ್ಧ ಕ್ರಿಯೆ ಮೊದಲಾದ ಧಾರ್ಮಿಕ ವಿಧಿಗಳು ಜ.13, 14ರಂದು ನಡೆಯಲಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.