ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೀಯ: ಪ್ರಭು ಚವ್ಹಾಣ

ಹೊಸದಿಗಂತ ವರದಿ ಬೀದರ:

ನಾಡನ್ನು ಹೈದ್ರಾಬಾದ್ ನಿಜಾಮರ ಆಳ್ವಿಕೆಯಿಂದ ವಿಮುಕ್ತಗೊಳಿಸಲು ಹೋರಾಡಿದ ಮಹಾಪುರುಷರ ತ್ಯಾಗ, ಬಲಿದಾನಗಳು ಸ್ಮರಣೀಯವಾಗಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.‌

ಔರಾದ ತಾಲ್ಲೂಕು ಆಡಳಿತದ ವತಿಯಿಂದ ಸೆಪ್ಟೆಂಬರ್ 17ರಂದು ಔರಾದ(ಬಿ) ತಾಲ್ಲೂಕು ಆಡಳಿತ ಸೌಧದ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

1947ರ ಆಗಸ್ಟ್ 15ರಂದು ಇಡೀ ದೇಶ ಸ್ವಾತಂತ್ರ್ಯದ ಸಂಭ್ರದಲ್ಲಿದ್ದರೆ ನಮ್ಮ ಭಾಗ ಮಾತ್ರ ಇನ್ನೂ ಸ್ವಾತಂತ್ರ್ಯವಾಗದೇ ನಿಜಾಮರ ಆಳ್ವಿಕೆಯಲ್ಲಿತ್ತು. ನಿಜಾಮ ಅರಸರು ಮಾತ್ರ ಭಾರತದ ಒಕ್ಕೂಟಕ್ಕೆ ವಿಲೀನಗೊಳ್ಳಲು ಒಪ್ಪುತ್ತಿರಲಿಲ್ಲ. ಇವರ ಅವಧಿಯಲ್ಲಿ ರಜಾಕೋರರ ಹಾವಳಿಯಿಂದ ಜನ ನಲುಗಿ ಹೋಗಿದ್ದರು. ಗೋರ್ಟಾದಲ್ಲಿ ದೊಡ್ಡ ಹತ್ಯಾಕಾಂಡವೇ ನಡೆದುಹೋಗಿತ್ತು. ಇದಕ್ಕೆ ಎರಡನೇ ಜಲಿಯನ್ ವಾಲಾಬಾಗ್ ಅಂತಲೂ ಕರೆಯಲಾಗುತ್ತದೆ. ನಂತರ ಸ್ವಾತಂತ್ರ್ಯಕ್ಕಾಗಿ ಚಳುವಳಿಗಳು ಆರಂಭವಾದವು. ಸಾಕಷ್ಟು ವೀರ ಮಹಾಪುರುಷರು ತಮ್ಮ ಪ್ರಾಣವನ್ನು ಪಣಕಿಟ್ಟು ಹೋರಾಟ ಮಾಡಿದ್ದರು. ಕೊನೆಗೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದಿಟ್ಟ ನಡೆಯಿಂದಾಗಿ ಪೊಲೀಸ್ ಕಾರ್ಯಾಚರಣೆ ನಡೆದು ಹೈದ್ರಾಬಾದ್ ಅರಸರಿಂದ ವಿಮುಕ್ತಿ ಪಡೆಯಲಾಯಿತು. ಸೆಪ್ಟೆಂಬರ್ 17 ನಮಗೆ ಅತ್ಯಂತ ಮಹತ್ವದ ಮತ್ತು ಸಂಭ್ರಮದ ದಿನವಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಹೋರಾಟದಲ್ಲಿ ರಮಾನಂದ ತೀರ್ಥರು, ಬಸವರಾಜ ಹುಡಗಿ, ಬನ್ಸಿಲಾಲ್, ಶಾಮಲಾಲ್, ರಾಮಚಂದ್ರ ವೀರಪ್ಪ, ಹಕ್ಕಿತರಾಯ ಚಿಟಗುಪ್ಪಕರ್, ಹಣಮಂತರಾವ್ ಆರ್ಯ, ಇಂದ್ರಸಿಂಗ್ ರಾಜಪೂತ, ಮಹಾದೇವಪ್ಪ ಲೋಖಂಡೆ, ಯಶವಂತರಾವ ಸಾಯಗಾಂವಕರ್, ರಂಗನಾಥರಾವ ಸಾಯಗಾಂವಕರ್, ಮುರುಳಿಧರರಾವ ಕಾಮತಿಕರ್, ಮಾಣಿಕರಾವ ಫುಲೆಕರ್, ಬ್ರಿಜಪಾಲಸಿಂಗ್ ಠಾಕೂರ್, ಮಹಾದೇವಪ್ಪ ಡುಮಣೆ, ಚನ್ನವೀರ ಸ್ವಾಮಿ, ಅಣ್ಣಾರಾವ ಮುಚಳಂಬೆಯಂತಹ ಅನೇಕ ಮಹಾಪುರುಷರು ಸಮರ್ಪಣಾ ಭಾವದಿಂದ ಪಾಲ್ಗೊಂಡಿದ್ದರು. ಅವರೆಲ್ಲರನ್ನು ಸ್ಮರಿಸುವುದು ಮತ್ತು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಔರಾದ(ಬಿ) ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಕಾರಂಜಾ ಜಲಾಶಯದಿಂದ ಔರಾದ ಪಟ್ಟಣಕ್ಕೆ ನೀರು ಕಲ್ಪಿಸುವ 84 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಟೆಂಡರ್ ಪ್ರಕ್ರಿಯೂ ಮುಗಿದಿದ್ದು, ಕೂಡಲೇ ಕೆಲಸಕ್ಕೆ ಚಾಲನೆ ನೀಡಲಾಗುವುದೆಂದು ಹೇಳಿದರು. ಹಾಗೆಯೇ ಔರಾದ(ಬಿ) ಪಟ್ಟಣದಲ್ಲಿ ಸುಸಜ್ಜಿತ ಕೋರ್ಟ್ ಕಟ್ಟಡ ನಿರ್ಮಿಸಬೇಕೆಂಬ ಬಹುದಿನಗಳ ಬೇಡಿಕೆಯೂ ಸಾಕಾರಗೊಳ್ಳುವ ಕಾಲ ಸಮೀಪಿಸಿದೆ. 13 ಕೋಟಿಯ ಯೋಜನೆಗೂ ಮಂಜೂರಾತಿ ಸಿಕ್ಕಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಹೀಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಔರಾದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬೇಕಿರುವ ಎಲ್ಲ ಕೆಲಸಗಳನ್ನು ಮಾಡಲಾಗುವುದು ಎಂದರು.

ಔರಾದ(ಬಿ) ತಹಸೀಲ್ದಾರರು ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಅಧ್ಯಕ್ಷರಾದ ಮಲಶೆಟ್ಟಿ ಚಿದ್ರಿ ಅವರು ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಮಹೇಶಕುಮಾರ.ಆರ್ ಅವರು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷರಾದ ದೊಂಡಿಬಾ ನರೋಟೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರ ಸಿಂಗ್ ಠಾಕೂರ್, ಆರಕ್ಷಕ ವೃತ್ತ ನಿರೀಕ್ಷಕರಾದ ರಘುವೀರಸಿಂಗ್ ಠಾಕೂರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಕಸೂದ್ ಅಹ್ಮದ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಶ್ವಕರ್ಮ ಜಯಂತಿ ಆಚರಣೆ:

ಜಗದ್ಗುರು ವಿರಾಟ ವಿಶ್ವಕರ್ಮ ಜಯಂತಿಯ ನಿಮಿತ್ತ ಔರಾದ ತಾಲ್ಲೂಕು ಆಡಳಿತ ಸೌಧದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪನಮನ ಸಲ್ಲಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಗುರು ರಮೇಶ ಆರ್.ಪಾಂಚಾಳ ಅವರು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರರು, ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!