ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ ಕ್ರಾಂತಿಯ ಚರ್ಚೆಗಳು ತೀವ್ರವಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶವು ರಾಜಕೀಯವಾಗಿ ಮಹತ್ತರ ಬೆಳವಣಿಗೆಯಾಗಿದೆ. ಲಕ್ಷಾಂತರ ಅಭಿಮಾನಿಗಳನ್ನು ಸೆಳೆದ ಈ ಸಮಾವೇಶದಲ್ಲಿ ಸಿಎಂ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ದೂರ-ನೆರೆಯ ರಾಜಕೀಯ ಮತ್ತೊಮ್ಮೆ ಬಹಿರಂಗ ಗೊಂಡಿದೆ.
ಕಾರ್ಯಕ್ರಮದ ಆರಂಭದಲ್ಲಿ ಡಿಕೆ ಶಿವಕುಮಾರ್ ಅವರು ವೇದಿಕೆಯಿಂದ ನಿರ್ಗಮಿಸಿದ ಘಟನೆ ಬಹುಚರ್ಚೆಗೆ ಕಾರಣವಾಯಿತು. ಸಿಎಂ ಸಿದ್ದರಾಮಯ್ಯ ಭಾಷಣ ಆರಂಭಿಸುವಾಗಲೇ ಡಿಸಿಎಂ ಅವರು ಮೈಸೂರು ಸಮಾವೇಶವನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ತೆರಳಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ದಾರಿ ಮಾಡಿದೆ. ಇದೇ ವೇಳೆ ಸಿಎಂ ಅವರು ವೇದಿಕೆಯಲ್ಲಿದ್ದ ಸಚಿವರು ಮತ್ತು ಶಾಸಕರಿಗೆ ಮಾತ್ರ ಸ್ವಾಗತ ವ್ಯಕ್ತಪಡಿಸಿ ಡಿಕೆಶಿ ಹೆಸರು ಉಲ್ಲೇಖಿಸದೆ ಇದ್ದದ್ದು ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, “ಡಿಕೆ ಶಿವಕುಮಾರ್ ಬೇರೆ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೋದವರು. ವೇದಿಕೆಯ ಮೇಲೆ ಇಲ್ಲದವರಿಗೆ ಹೇಗೆ ಸ್ವಾಗತ ಹೇಳಬೇಕು? ಇದ್ದವರಿಗೆ ಮಾತ್ರ ಕೋರಬಹುದು, ಮನೆಯಲ್ಲಿ ಕುಳಿತವರಿಗೆ ಅಲ್ಲ” ಎಂದು ಖಾರವಾಗಿ ಟಾಂಗ್ ನೀಡಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಸಿಎಂ 2658 ಕೋಟಿ ರೂಪಾಯಿ ವಿವಿಧ ಅಭಿವೃದ್ಧಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಒಟ್ಟು 2,658 ಕೋಟಿ ರೂಪಾಯಿಗಳ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಲಾಯಿತು. ಇಲ್ಲಿ 24 ಇಲಾಖೆಗಳ 74 ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ರಸ್ತೆ ಅಭಿವೃದ್ಧಿಗೆ 393 ಕೋಟಿ, ನೂತನ ಬಸ್ ನಿಲ್ದಾಣಕ್ಕೆ 120 ಕೋಟಿ, ವಿದ್ಯಾರ್ಥಿ ನಿಲಯಗಳಿಗೆ 108 ಕೋಟಿ ಹಾಗೂ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ವಿವಿಧ ಆರೋಗ್ಯ ಸೌಲಭ್ಯಗಳ ನಿರ್ಮಾಣಕ್ಕೆ 175 ಕೋಟಿ ರೂ.ಗಳನ್ನು ಹಂಚಿಕೆಯಾಗಿವೆ.
ಮೈಸೂರಿನಲ್ಲಿ ನಡೆದ ಈ ಸಾಧನಾ ಸಮಾವೇಶ, ಕಾಂಗ್ರೆಸ್‌ನೊಳಗಿನ ರಾಜಕೀಯ ಸಮೀಕರಣಗಳು, ಹಾಗೂ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಸಾಕಷ್ಟು ಸಂದೇಶಗಳನ್ನು ಒದಗಿಸಿದ್ದು, ಸೆಪ್ಟೆಂಬರ್ ತಿಂಗಳಲ್ಲಿಯೇ ನಡೆಯಬಹುದಾದ ಪ್ರಮುಖ ರಾಜಕೀಯ ಬದಲಾವಣೆಯ ಸಂಕೇತವಲ್ಲವೇ ಎಂಬ ಪ್ರಶ್ನೆ ಕೇಳಿ ಬಂದಿದೆ.