January15, 2026
Thursday, January 15, 2026
spot_img

ರಸ್ತೆ ಮಧ್ಯೆ ಚೆಲ್ಲಿದ ಕುಂಕುಮ, ಕತ್ತರಿಸಿದ ನಿಂಬೆ: ಅಷ್ಟಕ್ಕೂ ಅಲ್ಲಿ ನಡೆದಿದ್ದಾದ್ರೂ ಏನು?

ಹೊಸದಿಗಂತ ವರದಿ ಗದಗ:

ದಾನ ಚಿಂತಾಮಣಿ ಅತ್ತಿಮಬ್ಬೆ ಮಹಾದ್ವಾರದ ಬಳಿ ವಾಮಾಚಾರ ಮಾಡಿರುವ ಘಟನೆ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದ್ದು, ಈ ವಾಮಾಚಾರ ಕಂಡು ಸ್ಥಳಿಯರು ಆತಂಕಕ್ಕೆ ಒಳಗಾಗಿದ್ದಾರೆ.

ಚೌಕಾಕಾರದ ಬಾಕ್ಸ್ ನಲ್ಲಿ ಚತುರ್ಭುಜ ರಂಗವಲ್ಲಿ ಹಾಕಲಾಗಿದೆ. ಅದರಲ್ಲಿ ನಿಂಬೆ ಹಣ್ಣು, ಮೊಟ್ಟೆ, ಎಕ್ಕದ ಎಲೆ, ಅಡಿಕೆ, ವೀಳ್ಯದೆಲೆ, ಕುಂಕುಮ, ಭಂಡಾರ, ಹೂ,‌ ನಾಣ್ಯ ಇಟ್ಟು ವಾಮಾಚಾರ ಮಾಡಲಾಗಿದೆ.

ಮೂರು ರಸ್ತೆ ಕೂಡುವ ಗ್ರಾಮದ ಮುಖ್ಯ ದ್ವಾರವಾದ ಬಳಿ ಇದನ್ನು ಮಾಡಲಾಗಿದೆ. ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯದಿಂದ ಸುತ್ತಮುತ್ತಲಿನ ಮನೆ ಹಾಗೂ ಅಂಗಡಿ ಮಾಲೀಕರಿಗೆ ಆತಂಕ ಶುರುವಾಗಿದೆ.

ಇದು ಕಳ್ಳರ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು. ಹೀಗೆ ವಾಮಾಚಾರ ಮಾಡುವುದರಿಂದ ಜನ ಭಯಭೀತರಾಗಿ ರಾತ್ರಿ ವೇಳೆ ಜನ ಓಡಾಡುವುದಿಲ್ಲ. ಮನೆ ಅಥವಾ ಅಂಗಡಿಗಳ ಕಳ್ಳತನ ಮಾಡಲು ಅನುಕೂಲ ಆಗಬಹುದು ಎಂಬ ಉದ್ದೇಶದಿಂದ ಹೀಗೆ ಮಾಡಿರಬಹುದು ಎಂಬ ಚರ್ಚೆ ವ್ಯಕ್ತವಾಗುತ್ತಿದೆ.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಬಗ್ಗೆ ಗ್ರಾಮಸಭಾದಲ್ಲಿ ಚರ್ಚೆ ಮಾಡಲಾಗಿದ್ದು, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯತ್ ನಿಂದ ಸಿ.ಸಿ ಕ್ಯಾಮರಾ ಅಳವಿಡಿಸಿ ಕಳ್ಳತನ, ದರೋಡೆ ಪ್ರಕರಣಗಳನ್ನು ತಪ್ಪಿಸಬೇಕು. ವಾಮಾಚಾರ ಮಾಡಿ ಜನರಲ್ಲಿ ಭಯ ಹುಟ್ಟಿಸುವಂತವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

Most Read

error: Content is protected !!