ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಹಿತಿ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು 2023ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತ್ಯ ಅಕಾಡೆಮಿಯು ತನ್ನ ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು 24 ಭಾಷೆಗಳಲ್ಲಿ ಇಂದು (ಡಿ.20) ಪ್ರಕಟಿಸಿದೆ. 9 ಕವನಗಳು, 6 ಕಾದಂಬರಿಗಳು, 5 ಸಣ್ಣ ಕಥೆಗಳು, 3 ಪ್ರಬಂಧಗಳು ಮತ್ತು 1 ಸಾಹಿತ್ಯ ಅಧ್ಯಯನಗಳು 2023ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿವೆ.
ಲಕ್ಷ್ಮೀಶ ತೋಳ್ಪಾಡಿ ಅವರು ಬರೆದ ‘ಮಹಾಭಾರತ ಅನುಸಂಧಾನದ ಭಾರತಯಾತ್ರೆ’ ಪ್ರಬಂಧಗಳಿಗೆ ಈ ವಿಶೇಷ ಗೌರವ ಅರಸಿ ಬಂದಿದೆ.
ಲಕ್ಷ್ಮೀಶ ತೋಳ್ಪಾಡಿ ಪರಿಚಯ
ಲಕ್ಷ್ಮೀಶ ತೋಳ್ಪಾಡಿ ಅವರು ಲೇಖಕ, ಚಿಂತಕ ಮತ್ತು ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು. ಇವರ ಆಡುಭಾಷೆ ತುಳು. ಇವರು ತಾರುಣ್ಯದಲ್ಲಿ ಕೆಲ ಕಾಲ ಬೆಂಗಳೂರಿನಲ್ಲಿದ್ದರು. ವೈ.ಎನ್.ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ ಪತ್ರಿಕೆ, ಕಿ.ರಂ. ನಾಗರಾಜ ಅವರ ಒಡನಾಟ ಇವರಿಗೆ ಸಿಕ್ಕಿತ್ತು.
ಲಕ್ಷ್ಮೀಶ ಅವರದು ಕವಿ ಹೃದಯ, ಭಗವದ್ಗೀತೆಯ ಬಗೆಗಿನ ‘ಮಹಾಯುದ್ದಕ್ಕೆ ಮುನ್ನ’ ಮೊದಲ ಪ್ರಕಟಿತ ಕೃತಿ. ಅಂತರ್ಜಾಲ ಪತ್ರಿಕೆಯಲ್ಲಿ ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ ‘ಸಂಪಿಗೆ ಭಾಗವತ’, ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’, ‘ಭವ ತಲ್ಲಣ’ (ತಾಳಮದ್ದಲೆ ಕುರಿತು) ಕೃತಿಗಳು ಪ್ರಕಟವಾಗಿವೆ.