ಹೊಸದಿಗಂತ ಚಿತ್ರದುರ್ಗ:
ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ಫೆಬ್ರವರಿ 17 ಮತ್ತು 18ರಂದು ಅದ್ಧೂರಿಯಾಗಿ ಜರುಗಲಿರುವ ೧೮ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಿನಿಂದಲೇ ಸಿದ್ಧತೆಗಳು ಚುರುಕುಗೊಂಡಿವೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಕನ್ನಡದ ವಾತಾವರಣ ನಿರ್ಮಿಸಲು ಕರುನಾಡ ವಿಜಯಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಶನಿವಾರ ಜಾಗೃತಿ ಜಾಥಾ ನಡೆಸಿದರು.
ನಗರದ ಗಾಂಧಿವೃತ್ತ, ದೊಡ್ಡಪೇಟೆ, ಆನೆಬಾಗಿಲು ರಸ್ತೆ ಹಾಗೂ ಸಂತೆಹೊಂಡದ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾರ್ಯಕರ್ತರು, ಪ್ರತಿಯೊಂದು ಅಂಗಡಿ ಮುಂಗಟ್ಟುಗಳಿಗೆ ತೆರಳಿ ಸಾರ್ವಜನಿಕರಲ್ಲಿ ವಿನಂತಿಸಿದರು. “ಪ್ರತಿ ಅಂಗಡಿಯ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು. ಒಂದು ವೇಳೆ ಆಂಗ್ಲ ಭಾಷೆಯ ಫಲಕಗಳಿದ್ದರೆ ಕೂಡಲೇ ಬದಲಿಸಬೇಕು, ಇಲ್ಲವಾದಲ್ಲಿ ನಾವೇ ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ” ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನವು ಕನ್ನಡದ ಅಸ್ಮಿತೆಯ ಹಬ್ಬವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ಕನ್ನಡ ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕಾರ್ಯಕರ್ತರು ಮನವಿ ಮಾಡಿದರು.
ಈ ಜಾಗೃತಿ ಅಭಿಯಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಯುವ ಘಟಕದ ಘನಶ್ಯಾಂ, ಮಲ್ಲಪ್ರಸಾದ್ ಕುಮಾರ್ ಹಾಗೂ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ನೇತೃತ್ವ ವಹಿಸಿದ್ದರು. ಮಹಿಳಾ ಘಟಕದ ವೀಣಗೌರಣ್ಣ, ನಿಸಾರ್ ಅಹಮದ್, ಹಿರಿಯೂರು ಘಟಕದ ತಿಪ್ಪೇಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಕನ್ನಡದ ಜಾಗೃತಿ ಮೂಡಿಸಿದರು.



