ಸಾಕ್ಷಿ ಮಲಿಕ್ ಕಾಂಗ್ರೆಸ್ ಕೈಗೊಂಬೆ : ಬಿಜೆಪಿ ಸಹ ಉಸ್ತುವಾರಿ ಬಬಿತಾ ಫೋಗಟ್ ಆರೋಪ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (ಡಬ್ಲ್ಯುಎಫ್‌ಐ) ನಿರ್ಗಮಿತ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಇದೀಗ ಭಾರತದ ಕುಸ್ತಿಪಟು ಬಬಿತಾ ಫೋಗಟ್ ಅವರು ಟ್ವೀಟ್​ವೊಂದನ್ನು ಮಾಡಿದ್ದು, ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವರ್ತ್ ಕಡಿಯನ್ ನಿನ್ನೆ ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋಗೆ ಒಲಿಂಪಿಯನ್​ , ಉತ್ತರ ಪ್ರದೇಶದ ಭಾರತೀಯ ಜನತಾ ಯುವ ಮೋರ್ಚಾದ ಸಹ ಉಸ್ತುವಾರಿಯೂ ಆಗಿರುವ ಬಬಿತಾ ಫೋಗಟ್ ಖಾರ ಪ್ರತಿಕ್ರಿಯೆ ನೀಡಿದ್ದಾರೆ. ಸಾಕ್ಷಿ ಮಲಿಕ್ ಅವರು “ಕಾಂಗ್ರೆಸ್​ನ ಕೈಗೊಂಬೆ” ಎಂದು ಆರೋಪಿಸಿದ್ದಾರೆ.

ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಬಬಿತಾ ಫೋಗಟ್, “ನಿನ್ನೆ ನನ್ನ ತಂಗಿ ಮತ್ತು ಅವಳ ಗಂಡನ ವಿಡಿಯೋ ನೋಡುವಾಗ ನನಗೆ ತುಂಬಾ ಬೇಸರವಾಯಿತು. ಜೊತೆಗೆ ನಗು ಕೂಡಾ ಬಂತು. ಮೊದಲನೆಯದಾಗಿ, ಸಾಕ್ಷಿ ಮಲಿಕ್ ತೋರಿಸಿದ ಅನುಮತಿ ಪತ್ರದಲ್ಲಿ ನನ್ನ ಸಹಿ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಸತ್ಯ ಹೊರಬರುತ್ತದೆ ಎಂದು ನಾನು ಮೊದಲನೇ ದಿನದಿಂದಲೇ ಹೇಳುತ್ತಿದ್ದೇನೆ. ಒಬ್ಬ ಮಹಿಳಾ ಆಟಗಾರ್ತಿಯಾಗಿ ನಾನು ದೇಶದ ಎಲ್ಲ ಆಟಗಾರ್ತಿಯರ ಜೊತೆಗಿರುತ್ತೇನೆ, ಮುಂದೆಯೂ ಕೂಡ ಇರುತ್ತೇನೆ ಎಂದರು.

ಅಕ್ಕ, ನೀವು ಬಾದಾಮಿ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನಬಹುದು, ಆದರೆ ನಾವು ನನ್ನ ದೇಶದ ಜನರು ಗೋಧಿಯಿಂದ ಮಾಡಿದ ಬ್ರೆಡ್ ಅನ್ನು ಸಹ ತಿನ್ನುತ್ತೇವೆ. ನೀವು ಕಾಂಗ್ರೆಸ್ ಕೈಗೊಂಬೆಯಾಗಿದ್ದೀರಿ ಎಂದು ದೇಶದ ಜನರಿಗೆ ಅರ್ಥವಾಗಿದೆ. ಈಗ ನಿಮ್ಮ ನಿಜವಾದ ಉದ್ದೇಶವನ್ನು ಹೇಳಬೇಕಾದ ಸಮಯ ಬಂದಿದೆ. ಏಕೆಂದರೆ, ಸಾರ್ವಜನಿಕರೇ ನಿಮಗೆ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಬಬಿತಾ ಫೋಗಟ್ ಹೇಳಿದರು.

ಶನಿವಾರ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವರ್ತ್ ಕಡಿಯನ್ ಟ್ವಿಟರ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ, “ಭಾರತೀಯ ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂಬ ಕಾರಣಕ್ಕೆ ನಾವು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಅವರು ಅನೇಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ನಮ್ಮ ವಿರುದ್ಧ ಕೆಲವು ವದಂತಿಗಳು ಹರಡುತ್ತಿವೆ. ಕೆಲ ಮಾಧ್ಯಮಗಳು ತಪ್ಪುದಾರಿಗೆಳೆಯುವ ವರದಿಗಳನ್ನು ಪ್ರಸಾರ ಮಾಡುತ್ತಿವೆ. ನಮ್ಮ ಹೋರಾಟವು ಸರ್ಕಾರದ ವಿರುದ್ಧವಲ್ಲ. ಆದರೆ, ಫೆಡರೇಶನ್‌ನ ಚುಕ್ಕಾಣಿ ಹಿಡಿದಿದ್ದ ಡಬ್ಲ್ಯುಎಫ್‌ಐ ಮುಖ್ಯಸ್ಥನ ವಿರುದ್ಧ. ಕಳೆದ 10 ರಿಂದ 12 ವರ್ಷಗಳಿಂದ ಮಹಿಳಾ ಕುಸ್ತಿಪಟುಗಳ ಮೇಲೆ ಏನಾಗುತ್ತಿದೆ ಎಂಬುದರ ಬಗ್ಗೆ ಕುಸ್ತಿಪಟುಗಳು ಮತ್ತು ಅವರ ತರಬೇತುದಾರಿಗೆ ಮಾತ್ರ ಗೊತ್ತು” ಎಂದು ಸ್ಪಷ್ಟಪಡಿಸಿದ್ದರು.

https://twitter.com/BabitaPhogat/status/1670277781459185665?cxt=HHwWgsDRgd6ygq4uAAAA

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!